August 13, 2026

ಬಿಜೆಪಿ ಸಂಸದ, WFI ಅಧ್ಯಕ್ಷನ ವಿರುದ್ಧ ಲೈಂಗಿಕ ಶೋಷಣೆ ಗಂಭೀರ ಆರೋಪ: ಮಹಿಳಾ ಕುಸ್ತಿಪಟುಗಳಿಂದ ಧರಣಿ

0
Untitled-design-34-1.jpg

ನವ ದೆಹಲಿ: ಭಾರತೀಯ ಕುಸ್ತಿ ಫೆಡರೇಶನ್‌ನ ಅಧ್ಯಕ್ಷ, (WFI) ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ಶೋಷಣೆ ನಡೆಸಿರುವ ಗಂಭೀರ ಆರೋಪ ಕೇಳಿ ಬಂದಿದೆ.

ಒಲಿಂಪಿಯನ್ ಕುಸ್ತಿಪಟು ವಿನೇಶಾ ಫೋಗಟ್ ಅವರು ಈ ಗಂಭೀರ ಆರೋಪ ಮಾಡಿದ್ದು, ಹಲವು ವರ್ಷಗಳಿಂದ ಮಹಿಳಾ ಕುಸ್ತಿಪಟುಗಳನ್ನು ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರು ಲೈಂಗಿಕವಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಬಹಿರಂಗಪಡಿಸಿದ್ದಾರೆ.

ಬ್ರಿಜ್ ಭೂಷಣ್ ಶರಣ್ ಸಿಂಗ್ ಶೋಷಣೆಯ ವಿರುದ್ಧ ಒಂದಾಗಿರುವ ಕುಸ್ತಿ ಪಟುಗಳು ದಿಲ್ಲಿಯ ಜಂತರ್‌ ಮಂತರ್‌ನಲ್ಲಿ ಧರಣಿಗೆ ಕುಳಿತಿದ್ದು, ಆರೋಪಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಧರಣಿ ನಿರತರು ಆಗ್ರಹಿಸಿದ್ದಾರೆ.

2021ರ ಟೋಕಿಯೋ ಒಲಿಂಪಿಕ್ ಕ್ರೀಡಾಕೂಟದ ನಂತರ ಕುಸ್ತಿ ಫೆಡರೇಶನ್‌ (ಡಬ್ಲ್ಯೂಎಫ್‌ಐ) ಜೊತೆ ಭಿನ್ನಾಭಿಪ್ರಾಯ ಹೊಂದಿರುವ ಏಷ್ಯನ್ ಗೇಮ್ಸ್ ಚಾಂಪಿಯನ್ ಕುಸ್ತಿಪಟು ವಿನೇಶಾ ಫೋಗಟ್ ಅವರು, ಕುಸ್ತಿ ಒಕ್ಕೂಟ ತನೆಗೆ ಮಾನಸಿಕ ಕಿರುಕುಳ ನೀಡಿರುವುದು ಮಾತ್ರವಲ್ಲದೇ, ಹಲವು ಮಹಿಳಾ ಕುಸ್ತಿಪಟುಗಳಿಗೆ ಕುಸ್ತಿ ಪೆಡರೇಶನ್‌ನ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಲಖನೌದಲ್ಲಿ ನಡೆದ ರಾಷ್ಟ್ರೀಯ ಕುಸ್ತಿ ತರಬೇತಿ ಶಿಬಿರದಲ್ಲಿ ಕೂಡ ಕೆಲವು ತರಬೇತುದಾರರು ಮಹಿಳಾ ಕುಸ್ತಿಪಟುಗಳನ್ನು ಲೈಂಗಿಕವಾಗಿ ಶೋಷಿಸಿದ್ದಾರೆ. ಫೆಡರೇಶನ್ ಅಧ್ಯಕ್ಷರ ಮಾತನ್ನು ಪಾಲಿಸುವ ಕೆಲವು ಮಹಿಳಾ ಕುಸ್ತಿಪಟುಗಳು ಕೂಡ ಶಿಬಿರದಲ್ಲಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಇನ್ನು ವಿನೇಶಾ ಫೋಗಟ್ ಅವರು ‘ತಾನು ಎಂದಿಗೂ ಲೈಂಗಿಕ ಶೋಷಣೆ ಅನುಭವಿಸಿಲ್ಲ’ ಎಂದು ಹೇಳಿದ್ದು, ಆದರೆ ಈ ಪ್ರತಿಭಟನೆಯಲ್ಲಿ ಸಂತ್ರಸ್ತರೊಬ್ಬರು ಭಾಗಿಯಾಗಿದ್ದಾರೆ. ಹೀಗಾಗಿ ಲೈಂಗಿಕ ಶೋಷಣೆ ಅನುಭವಿಸಿರುವ ಸಂತ್ರಸ್ತ ಕುಸ್ತಿಪಟುಗಳ ಜೊತೆ ನಿಲ್ಲುವುದಾಗಿ ವಿನೇಶಾ ಅವರು ಹೇಳಿದ್ದಾರೆ. ಕುಸ್ತಿ ಫೆಡರೇಶನ್‌ನ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರ ಲೈಂಗಿಕ ಶೋಷಣೆಯ ವಿರುದ್ಧ ದಿಲ್ಲಿಯ ಜಂತರ್‌ ಮಂತರ್‌ನಲ್ಲಿ ನಡೆಯುತ್ತಿರುವ ಧರಣಿಯಲ್ಲಿ ಸ್ಟಾರ್‌ ಕುಸ್ತಿಪಟುಗಳಾದ ವಿನೇಶಾ ಫೋಗಟ್, ಬಜರಂಗ್ ಪೂನಿಯಾ, ಸಾಕ್ಷಿ ಮಲಿಕ್, ಸುಮಿತ್ ಮಲಿಕ್ ಸೇರಿದಂತೆ ಇನ್ನಿತರ ಕುಸ್ತಿಪಟುಗಳು ಭಾಗಿಯಾಗಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!