ಮಂಗಳೂರು: 150ಕ್ಕೂ ಅಧಿಕ ಸ್ಥಾನಗಳಲ್ಲಿ ಮುಂಬರುವ ಚುನಾವಣೆಯಲ್ಲಿ ಬಿಜೆಪಿಗೆ ಗೆಲುವು: ನಳಿನ್ ಕುಮಾರ್ ಕಟೀಲ್
ಮಂಗಳೂರು: ಮುಂಬರುವ ಚುನಾವಣೆಯಲ್ಲಿ ಬಿಜೆಪಿಯು 150 ಸ್ಥಾನ ಪಡೆದು ಜಯಶಾಲಿಯಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಬೂತ್ ವಿಜಯ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಇನ್ನು 100 ದಿನಗಳಲ್ಲಿ ರಾಜ್ಯದಲ್ಲಿ ಚುನಾವಣೆ ನಡೆಯಲಿದೆ. ಜೆಡಿಎಸ್ ಭದ್ರಕೋಟೆ ಮಂಡ್ಯ, ಹಾಸನ ಅನ್ನೋ ಮಾತಿತ್ತು. ಆದರೆ ಮಂಡ್ಯದಲ್ಲಿ ಅಮಿತ್ ಶಾ ಪ್ರವಾಸದ ಮೂಲಕ ಬಿಜೆಪಿ ಚೈತನ್ಯ ಹೆಚ್ಚಾಗಿದೆ. ಬಿಜೆಪಿ ಇಂದು ಸರ್ವವ್ಯಾಪಿಯಾಗಿದ್ದು, 150 ಸ್ಥಾನ ಪಡೆಯುತ್ತೇವೆ. ಸಂಘಟನಾತ್ಮಕ ಗೆಲುವು ಸಿಗಲಿದೆ, ದ.ಕ ಜಿಲ್ಲೆಯ ಎಂಟು ಸ್ಥಾನ ಗೆಲ್ತೇವೆ ಎಂದಿದ್ದಾರೆ.
ಅಯೋಧ್ಯೆ ಮಂದಿರಕ್ಕಾಗಿ ಸಂಘದ ಪ್ರಚಾರಕನಾಗಿ ಹೊರಟೆ. ಆಗ ರಾಮನ ಪಾದದ ಮೇಲಾಣೆ, ಮಂದಿರ ಅಲ್ಲೇ ಕಟ್ಟುವೆವು ಅಂದೆವು. ಇವತ್ತು ಪ್ರಧಾನಿ ಮೋದಿಯವರು ಅಲ್ಲೇ ರಾಮನ ಮಂದಿರ ಕಟ್ಟಿದ್ದಾರೆ ಎಂದರು.
ಇನ್ನು ಬೂತ್ ವಿಜಯದ ಮೂಲಕ ರಾಜ್ಯದ ವಿಜಯದ ಸಂಕಲ್ಪ ಮಾಡಿದ್ದೇವೆ. ಈ ಹತ್ತು ದಿನಗಳ ಕಾಲದಲ್ಲಿ ನಮ್ಮ ಬೂತ್ ಟಾರ್ಗೆಟ್ ಇದೆ. ಸಿದ್ದರಾಮಯ್ಯ, ಡಿಕೆಶಿ, ಖರ್ಗೆ ಎಲ್ಲರೂ ಮುಖ್ಯಮಂತ್ರಿ ಶರ್ಟ್ ಹೊಲಿಸಿದ್ದಾರೆ. ದ.ಕ ಜಿಲ್ಲೆಯಲ್ಲೂ ಮೂರು ಜನ ಸಚಿವರಾಗಲು ಶರ್ಟ್ ಹೊಲಿಸಿದ್ದಾರೆ. ಯು.ಟಿ.ಖಾದರ್, ರಮಾನಾಥ್ ರೈ, ಲೋಬೋ ಸಚಿವರಾಗಲು ಶರ್ಟ್ ಹೊಲಿಸಿದ್ದಾರೆ. ರಮಾನಾಥ್ ರೈ ಸೋಲಿಸಿ ಅಂತ ಖಾದರ್ ಗುಟ್ಟಾಗಿ ಹೇಳ್ತಾರೆ. ಖಾದರ್ ಸೋಲಿಸಿ ಅಂತ ರಮಾನಾಥ್ ರೈ ಗುಟ್ಟಾಗಿ ಹೇಳ್ತಿದಾರೆ. ಕಾಂಗ್ರೆಸ್ ನಲ್ಲಿ ಪುಸ್ತಕ ಮಾಡಲು ಜನ ಸಿಗಲ್ಲ, ಆದರೆ ಬಿಜೆಪಿಯಲ್ಲಿ ಪೇಜ್ ಗೊಬ್ಬರು ಪ್ರಮುಖರು ಸಿಗ್ತಾರೆ. ಕಾಂಗ್ರೆಸ್ ಗೆ ಬೂತ್ ಗೆ ಒಬ್ಬನೇ ಒಬ್ಬ ಹಿಂದೂ ಸಿಗಲ್ಲ. ಇವತ್ತು ನಡೀತಾ ಇರೋದು ಬೂತ್ ವಿಜಯ ಅಭಿಯಾನ. ಇವತ್ತಿನಿಂದ ನಮ್ಮ ಯಾತ್ರೆ ಆರಂಭ, ಜಿಲ್ಲೆಯ ಮನೆಮನೆಗಳಲ್ಲೂ ಧ್ವಜ ಹಾರಬೇಕು ಎಂದಿದ್ದಾರೆ.