ಕಾಲುವೆಯಲ್ಲಿ ಮತ್ತೋರ್ವ ವಿದ್ಯಾರ್ಥಿಯ ಮೃತದೇಹ ಪತ್ತೆ

ದೇವನಹಳ್ಳಿ: ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿ ದೇವನಾಯಕನಹಳ್ಳಿಯ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಇನ್ನೋರ್ವ ವಿದ್ಯಾರ್ಥಿಯ ಶವ ಶಾಲಾ ಹಿಂಭಾಗದ ದಕ್ಷಿಣ ಪಿನಾಕಿನಿ ಕಾಲುವೆಯಲ್ಲಿ ಗುರುವಾರ ಪತ್ತೆಯಾಗಿದ್ದು, ನೀರಿನಲ್ಲಿ ಮುಳುಗಿ ಮೃತಪಟ್ಟ ವಿದ್ಯಾರ್ಥಿಗಳ ಸಂಖ್ಯೆ 2ಕ್ಕೇರಿದೆ.
ಬುಧವಾರ ಸಂಜೆ ಇದೇ ಶಾಲೆಯ 8ನೇ ತರಗತಿಯ ಜಾವೀದ್ ಬಾಷಾ (15) ಎಂಬ ವಿದ್ಯಾರ್ಥಿ ನೀರಿನಲ್ಲಿ ಮುಳುಗಿ ಅಸುನೀಗಿದ್ದ.
ಇದೇ ವೇಳೆ ಸಂತೋಷ್ ಎಂಬ ವಿದ್ಯಾರ್ಥಿ ನಾಪತ್ತೆಯಾಗಿದ್ದ. ಆತನಿಗಾಗಿ ರಾತ್ರಿಯೆಲ್ಲಾ ಪೊಲೀಸ್ ಸಿಬ್ಬಂದಿ ಹುಡುಕಾಟ ನಡೆಸಿದ್ದು, ಸಿಕ್ಕಿರಲಿಲ್ಲ. ಪೋಷಕರಿಗೂ ಮಾಹಿತಿ ನೀಡದೆ ಮನೆಗೂ ಬಾರದಿದ್ದ ಕಾರಣ ಆತನಿಗಾಗಿ ಗುರುವಾರ ಬೆಳಿಗ್ಗೆ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ಮುಂದುವರಿಸಿದ್ದರು.
ಹೊಸಕೋಟೆ ತಾಲ್ಲೂಕು ಸೂಲಿಬೆಲೆ ಹೋಬಳಿಯ ಹುಲಿಗೆರೆಪುರದ 9ನೇ ತರಗತಿಯ ಸಂತೋಷ್ (14) ಶವ ಕಾಲುವೆಯಲ್ಲಿ ಪತ್ತೆಯಾಗಿದೆ.