ಸುಳ್ಯ: ಬೆಂಗಳೂರು ಮೂಲದ ವಿದ್ಯಾರ್ಥಿನಿ ಸುಳ್ಯದ ಬಿಸಿಎಂ ಹಾಸ್ಟೆಲ್‌ನಲ್ಲಿ ನೇಣಿಗೆ ಶರಣು

ಸುಳ್ಯ: ಬೆಂಗಳೂರು ಮೂಲದ ವಿದ್ಯಾರ್ಥಿನಿಯೊಬ್ಬಳು ಸುಳ್ಯದ ಬಿಸಿಎಂ ಹಾಸ್ಟೆಲ್‌ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ.
ರಾಮನಾಥಪುರದ ಕಾರಮಂಗಲ ತಾಲೂಕಿನ ಮಾರ್ಲಮಂಗಲ ಪುರುಷೋತ್ತಮ ಎಂಬವರ ಪುತ್ರಿ ಸೋನಿಯಾ (18) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ.
ಸುಳ್ಯದ ಕುರುಂಜಿಭಾಗ್ ಸಮೀಪದ ಬಿಸಿಎಂ ಹಾಸ್ಟೆಲ್‌ನಲ್ಲಿ ಘಟನೆ ನಡೆದಿದೆ.
ಈಕೆ ಖಾಸಗಿ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿನಿಯಾಗಿದ್ದಳು. ಸೋನಿಯಾ ಇಂದು ಕಾಲೇಜಿಗೆ ಹೋಗದೆ ರೂಂನಲ್ಲಿಯೇ ಉಳಿದುಕೊಂಡಿದ್ದಳು. ಮಧ್ಯಾಹ್ನ ಊಟಕ್ಕೆ ತಟ್ಟೆ ತರಲೆಂದು ರೂಂ ಬಳಿ ಬಂದಿದ್ದ ಆಕೆಯ ಗೆಳತಿ ಎಷ್ಟೇ ಬಾಗಿಲು ಬಡಿದರೂ ಸೋನಿಯಾ ಬಾಗಿಲು ತೆರೆದಿರಲಿಲ್ಲ. ಮಲಗಿರಬಹುದೆಂದು ಸ್ವಲ್ಪ ಹೊತ್ತು ಅಲ್ಲೇ ಇದ್ದು, ಮತ್ತೆ ಬಾಗಿಲು ಬಡಿದಾಗಲೂ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಗೆಳತಿ ವಾರ್ಡನ್‌ಗೆ ಮಾಹಿತಿ ನೀಡಿದ್ದಾಳೆ. ಕೂಡಲೇ ಹಾಸ್ಟೆಲ್ ಸಿಬ್ಬಂದಿ ಬಾಗಿಲು ಒಡೆದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.
ಸ್ಥಳಕ್ಕೆ ಸುಳ್ಯ ಪೊಲೀಸರು ಆಗಮಿಸಿದ್ದು, ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ..