ಪುತ್ತೂರು: ಕ್ಷೇತ್ರದಿಂದ ಅಶೋಕ್ ರೈ ಟಿಕೆಟ್ ಪಕ್ಕಾ?: ಆಕಾಂಕ್ಷಿಗಳ ಸಭೆಗೆ ಎಂಟ್ರಿ ಕೊಟ್ಟ ಅಶೋಕ್ ರೈ
ಪುತ್ತೂರು: ಮುಂಬರುವ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಪುತ್ತೂರು ಕ್ಷೇತ್ರದಿಂದ ಸ್ಪರ್ಧಿಸಲು ಈಗಾಗಲೇ 14 ಮಂದಿ ಕೆಪಿಸಿಗೆ ಅರ್ಜಿ ಸಲ್ಲಿಸಿದ್ದು , ಅರ್ಜಿ ಸಲ್ಲಿಸಿದ್ದ ಆಕಾಂಕ್ಷಿಗಳ ಸಭೆ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆಯಿತು.
ಕೆಪಿಸಿಸಿಯಿಂದ ನಿಯೋಜಿತರಾಗಿದ್ದ ಕಾಂಗ್ರೆಸ್ ಪ್ರಮುಖರಾದ ಸಲೀಂ ಅಹ್ಮದ್, ಮಧು ಬಂಗಾರಪ್ಪ ಸೇರಿದಂತೆ ಜಿಲ್ಲೆಯ ಪ್ರಮುಖ ಕಾಂಗ್ರೆಸ್ ನಾಯಕರ ಉಪಸ್ಥಿತಿಯಲ್ಲಿ ಆಕಾಂಕ್ಷಿಗಳ ಸಭೆ ನಡೆಸಲಾಯಿತು.
ಟಿಕೆಟ್ ಆಕಾಂಕ್ಷಿಗಳಾಗಿ ಅರ್ಜಿ ಸಲ್ಲಿಸಿದ್ದ ಎಲ್ಲರೂ ಸಭೆಗೆ ಹಾಜರಾಗಿದ್ದಾರೆ. ಒಬ್ಬೊಬ್ಬರನ್ನೇ ಕರೆದು ಪ್ರಮುಖರು ಮಾತುಕತೆ ನಡೆಸಿದ್ದಾರೆ. ಒಳಗಡೆ ಏನು ಮಾತುಕತೆ ನಡೆದಿದೆ ಎಂಬುವುದು ಹೊರಗಿನವರಿಗೆ ಗೊತ್ತಾಗಿಲ್ಲ.
ಕೊನೆಯಲ್ಲಿ ಪುತ್ತೂರಿನಿಂದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿ ಕೋಡಿಂಬಾಡಿ ಅಶೋಕ್‌ಕುಮಾರ್ ರೈ ಅವರೂ ಆಗಮಿಸಿದ್ದಾರೆ. ಅಶೋಕ್ ರೈ ಕಾಂಗ್ರೆಸ್ ಕಚೇರಿಗೆ ಬರುವುದನ್ನು ಕಂಡು ಕೆಲವರಿಗೆ ಅಚ್ಚರಿಯೂ ಕಾದಿತ್ತು. ಇವರು ಕಾಂಗ್ರೆಸ್ ಸೇರಿದ್ದು ಯಾವಾಗ ಎಂಬ ಪ್ರಶ್ನೆ ಹಲವರಲ್ಲಿ ಕುತೂಹಲವನ್ನು ಸೃಷ್ಟಿಸಿತ್ತು. ಕಾಂಗ್ರೆಸ್ ಸೇರಿರಬಹುದು.. ಸೇರದೆ ಇದ್ದರೆ ಅವರು ಕಚೇರಿಗೆ ಬರುತ್ತಾರ..? ಟಿಕೆಟ್ ಗೆ ಅರ್ಜಿ ಹಾಕುತ್ತಾರಾ. ? ಎಂದೂ ಕೆಲವರು ಮೂದಲಿಸಿದರು.
ಕೊನೆಗೆ 14 ಮಂದಿ ಟಿಕೆಟ್ ಆಕಾಂಕ್ಷಿಗಳ ಪೈಕಿ ಮೂವರನ್ನು ಅಂತಿಮಗೊಳಿಸಿ ಹೈಕಮಾಂಡ್‌ಗೆ ವರದಿ ಕಳುಹಿಸಲಿದ್ದು ಆ ಮೂವರಲ್ಲಿ ಯಾರು ಸೇರಿಕೊಳ್ಳಲಿದ್ದಾರೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಆಕಾಂಕ್ಷಿಗಳ ಸಭೆಯಲ್ಲೇ ಮೂವರನ್ನು ಅಂತಿಮಗೊಳಿಸುವ ಸಾಧ್ಯತೆ ದಟ್ಟವಾಗಿದೆ. 14 ಮಂದಿಯಲ್ಲಿ ಮೂವರ ಪಟ್ಟಿಗೆ ಯಾರ ಹೆಸರು ಸೇರುತ್ತದೆಯೋ? ಆ ಮೂವರಲ್ಲಿ ಯಾರಿಗೆ ಅಂತಿಮ ಟಿಕೆಟ್ ಸಿಗುತ್ತದೆಯೋ ಎಂಬುದು ಇನ್ನಷ್ಟು ಕುತೂಹಲಕ್ಕೆ ಕಾರಣವಾಗಿದೆ.