ಭಾರೀ ಮಳೆ:
ಗುರುವಾಯನಕೆರೆ-ಉಜಿರೆ ಹೆದ್ದಾರಿಯಲ್ಲಿ ಪ್ರವಾಹದಂತೆ ಹರಿದ ನೀರು
ಬೆಳ್ತಂಗಡಿ: ತಾಲೂಕಿನಾದ್ಯಂತ ಭಾರೀ ಮಳೆ ಸುರಿಯುತ್ತಿರುವ ಹಿನ್ನಲೆಯಲ್ಲಿ ಉಜಿರೆ ಮತ್ತು ಗುರುವಾಯನಕೆರೆ ಹೆದ್ದಾರಿಯಲ್ಲಿ ಭಾರಿ ಪ್ರಮಾಣದಲ್ಲಿ ನೀರು ಹರಿಯುತ್ತಿದ್ದು ವಾಹನ ಸಂಚಾರ ಅಸ್ತವ್ಯಸ್ತವಾಗಿದೆ.
ತಾಲೂಕಿನಾದ್ಯಂತ ಆದಿತ್ಯವಾರ ಮಧ್ಯಾಹ್ನದಿಂದ ಭಾರಿ ಮಳೆ ಸುರಿಯುತ್ತಿದ್ದು ವಾಹನ ಚಾಲಕರು ಸಂಚಾರಕ್ಕೆ ಪರದಾಟ ನಡೆಸುವಂತಾಗಿದೆ. ವಾರಾಂತ್ಯದಿಂದ ಹೆದ್ದಾರಿಯಲ್ಲಿ ವಾಹನಗಳ ಸಂಖ್ಯೆ ಅಧಿಕವಾಗಿತ್ತು, ಧರ್ಮಸ್ಥಳಕ್ಕೆ ಆಗಮಿಸುವ ಭಕ್ತಾದಿಗಳು ತೀವ್ರ ಮಳೆಯಿಂದಾಗಿ ಅನಾನುಕೂಲಗಳನ್ನು ಅನುಭವಿಸುವಂತಾಗಿದೆ. ಮಳೆಯ ತೀವ್ರತೆ ಹೆಚ್ಚಾದಂತೆ ಗುರುವಾಯನಕೆರೆ ಮತ್ತು ಉಜಿರೆಯಲ್ಲಿ ಪ್ರವಾಹದಂತೆ ರಸ್ತೆಯಲ್ಲಿ ನೀರು ಹರಿಯುವುದು ಸರ್ವೇ ಸಾಮಾನ್ಯವಾಗಿದೆ. ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ಮಳೆಯ ನೀರು ನೇರವಾಗಿ ಹೆದ್ದಾರಿಯಲ್ಲಿಯೇ ಹರಿಯುವುದರಿಂದ ವಾಹನ ಸಂಚಾರಕ್ಕೆ ಅಡೆ- ತಡೆ ಉಂಟಾಯಿತು.
ಇನ್ನು ಕೆಲವು ಪ್ರದೇಶಗಳಲ್ಲಿ ಎರಡು ದಿನಗಳಿಂದ ಮಳೆ ಸುರಿಯುತ್ತಿದ್ದು, ಹಲವೆಡೆ ಭೂಕುಸಿತದ ಭೀತಿ ತಲೆದೋರಿದೆ. ಮಳೆ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳುವಂತೆ ಮುನ್ನೆಚ್ಚರಿಕೆ ನೀಡಲಾಗಿದೆ.





