ವಿಟ್ಲ: ಪೆರುವಾಯಿಯಲ್ಲಿ ನೂತನವಾಗಿ ನಿರ್ಮಿಸಲಾದ ಫಾತಿಮಾ ಮಾತೆಯ ದೇವಾಲಯದ ಸಭಾಂಗಣ ಉದ್ಘಾಟನೆ: ಕಿನ್ನಿಗೋಳಿ ಚರ್ಚ್ ನ ಪ್ರಧಾನ ಧರ್ಮಗುರು ಫಾ. ಫಾವುಸ್ತಿಲ್ ಲೂಕಸ್ ಲೋಬೊರಿಂದ ಆಶಿರ್ವಚನ
ವಿಟ್ಲ: ಫಾತಿಮಾ ಮಾತೆಯ ದೇವಾಲಯ ಪೆರುವಾಯಿಯಲ್ಲಿ ನೂತನವಾಗಿ ನಿರ್ಮಿಸಲಾದ ಸಭಾಂಗಣದ ಉದ್ಘಾಟನಾ ಸಮಾರಂಭ ನೆರವೇರಿಸಲಾಯಿತು. ಕಿನ್ನಿಗೋಳಿ ಚರ್ಚ್ ನ ಪ್ರಧಾನ ಧರ್ಮಗುರು ಫಾ. ಫಾವುಸ್ತಿಲ್ ಲೂಕಸ್ ಲೋಬೊ ಸಭಾಂಗಣದ ಉದ್ಘಾಟನೆ ಹಾಗೂ ಆಶಿರ್ವಚನ ನೆರವೇರಿಸಿದರು.
ಬಳಿಕ ತಮ್ಮ ಸಂದೇಶ ನೀಡಿ, ಪೆರುವಾಯಿ ಚರ್ಚ್ ವ್ಯಾಪ್ತಿಯಲ್ಲಿ ಕಳೆದ ಇಪ್ಪತ್ತೈದು ವರ್ಷಗಳಿಂದ ಸಾಕಷ್ಟು ಬದಲಾವಣೆಯಾಗಿದೆ. ಶ್ರಮ ಜೀವಿಗಳ ಪರಿಶ್ರಮದಿಂದಾಗಿ ಇಲ್ಲಿನ ಚಿತ್ರಣವೇ ಬದಲಾಗಿದೆ ಎಂದರು. ಇನ್ನು ಅಧ್ಯಕ್ಷಿಯ ಭಾಷಣ ಮಾಡಿದ ಚರ್ಚ್ ನ ಧರ್ಮಗುರು ಫಾ. ವಿಶಾಲ್ ಮೋನಿಸ್, ನೂತನ ಸಭಾಂಗಣ ನಿರ್ಮಾಣಕ್ಕೆ ಅನೇಕರು ನೆರವಾಗಿದ್ದಾರೆ. ಪ್ರಮುಖವಾಗಿ ಕಿನ್ನಿಗೋಳಿ ಚರ್ಚ್ ನ ಧರ್ಮಗುರುಗಳು ಹಾಗೂ ಅಲ್ಲಿನ ಜನರ ಸಹಕಾರದಿಂದಾಗಿ ತಿಂಗಳೊಳಗೆ ಸಭಾಂಗಣ ಸಿದ್ಧಗೊಂಡಿದೆ. ಅತೀ ಕಡಿಮೆ ವೆಚ್ಚದಲ್ಲಿ ಕೆಲಸ ಕಾರ್ಯಗಳು ಪೂರ್ಣಗೊಂಡಿದೆ ಎಂದರು.
ಇದೇ ವೇಳೆ ಮಾಧ್ಯಮ ಕ್ಷೇತ್ರದಲ್ಲಿ ಸಾಧನೆಗೈದು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಪಾತ್ರರಾದ ವಿಲ್ಫ್ರೆಡ್ ಡಿಸೋಜ ಅವರಿಗೆ ಚರ್ಚ್ ವತಿಯಿಂದ ಸನ್ಮಾನಿಸಲಾಯಿತು. ಅಲ್ಲದೆ, ಚರ್ಚ್ ನಲ್ಲಿ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತರಾದ ಸಂ. ಅಂತೋನ್ ವಾಳೆಯ ಜೋನ್ಸನ್ ಮೊಂತೇರೊ ಹಾಗೂ ಸಂ. ಲಾರೆನ್ಸ್ ವಾಳೆಯ ಬಾಸಿಲ್ ಫೆರಾವೊ ಅವರನ್ನು ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಬ್ರ. ಮರ್ವಿನ್ ಲೋಬೊ, ಪಾಲನಾ ಮಂಡಳಿ ಉಪಾಧ್ಯಕ್ಷ ವಿನ್ಸೆಂಟ್ ಡಿಸೋಜ, ಕಾರ್ಯದರ್ಶಿ ವಿಲಿಯಂ ಡಿಸೋಜ, ಕ್ಯಾಥೊಲಿಕ್ ಸಭಾ ಅಧ್ಯಕ್ಷ ರಾಲ್ಫ್ ಡಿಸೋಜ ಮೊದಲಾದವರು ಇದ್ದರು.