ಆಸ್ಟ್ರೇಲಿಯಾ ವಿರುದ್ಧದ ಸೆಮಿಫೈನಲ್ ಪಂದ್ಯಕ್ಕೂ ಮುನ್ನ ಐಸಿಯುನಲ್ಲಿದ್ದ ಪಾಕಿಸ್ತಾನದ ಆಟಗಾರ ಮೊಹಮ್ಮದ್ ರಿಝ್ವಾನ್

ದುಬೈ: ಆಸ್ಟ್ರೇಲಿಯಾ ವಿರುದ್ಧದ ಮಹತ್ವದ ಸೆಮಿಫೈನಲ್ ಪಂದ್ಯಕ್ಕೂ ಮುನ್ನ ಎದೆಯ ಸೋಂಕಿನಿಂದ ತೀವ್ರವಾಗಿ ಬಳಲುತ್ತಿದ್ದ ಪಾಕಿಸ್ತಾನದ ಆಟಗಾರ ಮೊಹಮ್ಮದ್ ರಿಜ್ವಾನ್ ಎರಡು ದಿನಗಳ ಕಾಲ ಐಸಿಯುನಲ್ಲಿ ಚಿಕಿತ್ಸೆ ಪಡೆದಿದ್ದರು ಎಂಬುದು ವರದಿಯಾಗಿದೆ.
ಅತೀವ ಬದ್ಧತೆಯನ್ನು ಪ್ರದರ್ಶಿಸಿರುವ ರಿಜ್ವಾನ್, ಬಳಿಕ ಆಸ್ಟ್ರೇಲಿಯಾ ವಿರುದ್ಧ ನಡೆದ ಪಂದ್ಯದಲ್ಲಿ ಆಡಿದ್ದರಲ್ಲದೆ ತಂಡವು ಬೃಹತ್ ಮೊತ್ತ ಪೇರಿಸಲು ನೆರವಾಗಿದ್ದರು.
ಈ ವಿವರವನ್ನು ಪಾಕಿಸ್ತಾನ ತಂಡದ ವೈದ್ಯ ನಜೀಬ್ ಸೊಮ್ರೂ ಬಹಿರಂಗಪಡಿಸಿದ್ದಾರೆ. ಆದರೆ ರಿಜ್ವಾನ್ ಹೋರಾಟದ ಹೊರತಾಗಿಯೂ ಆಸೀಸ್ ವಿರುದ್ಧ ಐದು ವಿಕೆಟ್ ಅಂತರದ ಸೋಲಿಗೆ ಶರಣಾಗಿರುವ ಪಾಕಿಸ್ತಾನದ ವಿಶ್ವಕಪ್ ಟ್ರೋಫಿ ಕನಸು ಭಗ್ನಗೊಂಡಿತ್ತು.
ನವೆಂಬರ್ 9ರಂದು ಮೊಹಮ್ಮದ್ ರಿಜ್ವಾನ್ ಅವರಿಗೆ ತೀವ್ರ ಎದೆಯ ಸೋಂಕು ಕಾಣಿಸಿಕೊಂಡ ಪರಿಣಾಮ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಎರಡು ದಿನಗಳ ಕಾಲ ಐಸಿಯುನಲ್ಲಿ ಚಿಕಿತ್ಸೆ ಪಡೆದ ನಂತರ ಚೇತರಿಸಿಕೊಂಡರು. ಇವೆಲ್ಲವೂ ದೇಶಕ್ಕಾಗಿ ಆಡುವ ಹಂಬಲ ಹಾಗೂ ಸಾಧನೆಯ ದೃಢ ಸಂಕಲ್ಪವನ್ನು ತೋರಿಸುತ್ತದೆ ಎಂದು ಹೇಳಿದರು.