ವಿಟ್ಲ: ಸಾರ್ವಜನಿಕ ಶಾಂತಿ ಭಂಗ: ಒಬ್ಬ ಪೊಲೀಸ್ ವಶಕ್ಕೆ
ವಿಟ್ಲ: ಸಾರ್ವಜನಿಕ ಶಾಂತಿ ಭಂಗಕ್ಕೆ ಯತ್ನ ನಡೆಸುತ್ತಿರುವ ವಿಚಾರದಲ್ಲಿ ವ್ಯಕ್ತಿಯೊಬ್ಬನನ್ನು ವಿಟ್ಲ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕೇಪು ಗ್ರಾಮದ ಖಂಡಿಗ ನಿವಾಸಿ ಮಂಗಳೂರಿನಲ್ಲಿ ಕರಾಟೆ ಶಿಕ್ಷಕರಾಗಿರುವ ದರನಪ್ಪ (೩೮) ಆರೋಪಿಯಾಗಿದ್ದಾರೆ. ನೀರ್ಕಜೆ ಪರಿಸರದಲ್ಲಿ ಶಾಂತಿ ಭಂಗ ಮಾಡುತ್ತಿರುವ ಬಗ್ಗೆ ಸ್ಥಳೀಯರ ದೂರಿನ ಹಿನ್ನಲೆಯಲ್ಲಿ ವಿಟ್ಲ ಪೊಲೀಸರು ದರಣಪ್ಪ ಅವರನ್ನು ವಶಕ್ಕೆ ಪಡೆದು ತಾಲೂಕು ದಂಡಾಧಿಕಾರಿ ಮುಂದೆ ಹಾಜರುಪಡಿಸಿದ್ದಾರೆ. ಈ ಸಂದರ್ಭ ವಿಚಾರಣೆ ನಡೆಸಿ ದರನಪ್ಪ ಅವರಿಂದ ಸದ್ವರ್ತನೆಯ ವಿಚಾರದಲ್ಲಿ ಬಾಂಡ್ ಮುಚ್ಚಳಿಕೆ ಪಡೆದು ಬಿಡುಗಡೆ ಮಾಡಿದ್ದಾರೆ.
ತಿಂಗಳ ಹಿಂದೆ ಅತಿಯಾಗಿ ಮಧ್ಯ ಸೇವನೆ ಮಾಡಿ ಮನೆಯಲ್ಲಿ ಮಾನಸಿಕ ಅಸ್ವಸ್ಥನಂತೆ ವರ್ತಿಸುತ್ತಿದ್ದ ಹಿನ್ನಲೆಯಲ್ಲಿ ಪೊಲೀಸರ ಸಹಕಾರದಿಂದ ಪ್ರೆಂಡ್ಸ್ ವಿಟ್ಲ ತಂಡದ ಮೂಲಕ ಕಂಕನಾಡಿಯಲ್ಲಿರುವ ಮಧ್ಯವರ್ಜನ ಕೇಂದ್ರಕ್ಕೆ ಸೇರಿಸಲಾಗಿತ್ತು.
ನ.೬ರಂದು ಕೇಪು ಗ್ರಾಮದ ಚಿಮ್ಮಿನಡ್ಕದಲ್ಲಿ ಪುಣಚ ಸಂಕೇಶ ನಿವಾಸಿ ಜಗನ್ನಾಥ ಎಸ್. ಅವರು ದ್ವಿಚಕ್ರವಾಹನವನ್ನು ಚಲಾಯಿಸಿಕೊಂಡು ಹೋಗುತ್ತಿದ್ದ ಸಂದರ್ಭ ಕಾರನ್ನು ಅಜಾಗರೂಕತೆ ಹಾಗೂ ನಿರ್ಲಕ್ಷತೆಯಿಂದ ಚಲಾಯಿಸಿಕೊಂಡು ಬಂದ ದರಣಪ್ಪ ಎಂಬವರು ಗುದ್ದಿ ಪರಾರಿಯಾದ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜಗನ್ನಾಥ ಅವರ ಹಣೆ ಸೇರಿ ದೇಹದವಿವಿಧ ಭಾಗಕ್ಕೆ ಗಾಯಗಳಾಗಿ ಪುತ್ತೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸ್ಥಳೀಯವಾಗಿ ಕರಾಟೆ ಬರುತ್ತೆ ಎಂದು ಹೇಳಿಕೊಂಡು ಹೆದರಿಸುತ್ತಿದ್ದ, ಅತಿಯಾಗಿ ವಾಹನ ಚಲಾಯಿಸಿಕೊಂಡು ಹೋಗುತ್ತಿದ್ದ ಬಗ್ಗೆ ವಿಟ್ಲ ಠಾಣೆಗೆ ದೂರುಗಳು ಬರುತ್ತಿದೆ. ಈ ಹಿನ್ನಲೆಯಲ್ಲಿ ಠಾಣೆಗೆ ಕರೆಸಿ ಮುಚ್ಚಳಿಕೆಯನ್ನು ಪಡೆಯಲಾಗಿತ್ತು. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಪೊಲೀಸರು ದರಣಪ್ಪ ಅವರ ಮೇಲೆ ಏನೂ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಬಗ್ಗೆ ಸಂದೇಶಗಳು ಹರಿದಾಡುತ್ತಿದೆ.





