ದೈವ ನರ್ತಕರು, ದರ್ಶನ ಪಾತ್ರಿಗಳೊಂದಿಗೆ ನಾಳೆ ‘ಕಾಂತಾರ’ ವೀಕ್ಷಿಸಲಿರುವ ಸಚಿವ ಕೋಟ
ದೇಶ ವಿದೇಶದಲ್ಲಿ ಮೆಚ್ಚುಗೆಗೆ ಪಾತ್ರವಾದ ಕನ್ನಡದ ಕಾಂತಾರ ಸಿನಿಮಾವನ್ನು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿಯವರು ದೈವ ನರ್ತಕರು, ದರ್ಶನ ಪಾತ್ರಿಗಳೊಂದಿಗೆ ನಾಳೆ ವೀಕ್ಷಿಸಲಿದ್ದಾರೆ.
ಈ ಬಗ್ಗೆ ಟ್ವೀಟ್ ಮೂಲಕ ಮಾಹಿತಿ ನೀಡಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ, ನಮ್ಮ ನಾಡಿನ ಸಂಸ್ಕೃತಿಯ ಜೊತೆಗೆ ದೈವಾರಾಧನೆಯ ನಂಬಿಕೆಯ ಮಹತ್ವವನ್ನು ಸಿನಿಮಾದ ಮೂಲಕ ಜಗದ್ವಿಖ್ಯಾತಿಗೊಳಿಸಿದ ನಟ, ನಿರ್ದೇಶಕ ರಿಷಬ್ ಶೆಟ್ಟಿಯವರ ಕಾಂತಾರ ಸಿನಿಮಾವನ್ನು ನಾಳೆ ದೈವ ನರ್ತಕರು ಹಾಗೂ ದರ್ಶನ ಪಾತ್ರಿಗಳೊಂದಿಗೆ ವೀಕ್ಷಿಸಲಿದ್ದೇನೆ ಎಂದು ತಿಳಿಸಿದ್ದಾರೆ.
ಇನ್ನು ತುಳುನಾಡಿನ ದೈವಾರಾಧನೆ, ಕಂಬಳ ಸಹಿತ ಕರಾವಳಿ ಸಂಸ್ಕೃತಿಯನ್ನು ಬಿಂಬಿಸುವ ಕಾಂತಾರ ಸಿನಿಮಾವನ್ನು ಕುಂದಾಪುರ ಭಾಗದ ದೈವ ನರ್ತಕರು, ದರ್ಶನ ಪಾತ್ರಿಗಳ ಸಹಿತ, ದೈವದ ಸೇವೆ ಮಾಡುವ ಸಮಾಜ ಮತ್ತು ವ್ಯಕ್ತಿಗಳೊಂದಿಗೆ ಸಚಿವರು ಸಿನಿಮಾ ವೀಕ್ಷಿಸಲಿದ್ದಾರೆ.






