ಮಂಗಳೂರು: ಪ್ರತಿಭಾ ಕುಳಾಯಿ ವಿರುದ್ಧ ಅವಹೇಳನಕಾರಿ ಪೋಸ್ಟ್ – ಶ್ಯಾಮಸುದರ್ಶನ ಭಟ್ ಪತ್ತೆಗೆ ಬಲೆ ಬೀಸಿದ ಪೊಲೀಸರು
ಕಾಂಗ್ರೆಸ್ ನಾಯಕಿ ಪ್ರತಿಭಾ ಕುಳಾಯಿ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಿದ್ದ ಶ್ಯಾಮಸುದರ್ಶನ ಭಟ್ ವಿರುದ್ಧ ಮಂಗಳೂರಿನ ಪಾಂಡೇಶ್ವರದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಬಂಧನಕ್ಕಾಗಿ ಬಲೆ ಬೀಸಿದ್ದಾರೆ.
ಪ್ರತಿಭಾ ಕುಳಾಯಿ ನೀಡಿದ ದೂರು ಆಧರಿಸಿ ಪೊಲೀಸರು ಐಪಿಸಿ ಸೆಕ್ಷನ್ 354, 509, ಐಟಿ ಕಾಯ್ದೆ 67 ಮತ್ತು ಮಹಿಳಾ ದೌರ್ಜನ್ಯ ತಡೆ ಕಾಯ್ದೆಯಡಿ ಶ್ಯಾಮಸುದರ್ಶನ ಭಟ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಅ.18ರಂದು ಸುರತ್ಕಲ್ ಟೋಲ್ ಗೇಟ್ ವಿರುದ್ಧ ಮುತ್ತಿಗೆ ಹಾಕಿದ ಸಂದರ್ಭದಲ್ಲಿ ಪ್ರತಿಭಾ ಕುಳಾಯಿ ರಸ್ತೆಯಲ್ಲಿ ಮಲಗಿ ಪ್ರತಿಭಟನೆ ನಡೆಸಿದ್ದರು. ಅದರ ವಿಡಿಯೋ ವೈರಲ್ ಆಗಿದ್ದು, ಅದನ್ನು ಫೇಸ್ಬುಕ್ ಇನ್ನಿತರ ಜಾಲತಾಣದಲ್ಲಿ ಅಶ್ಲೀಲವಾಗಿ ನಿಂದಿಸಿ ಕೆಲವರು ಕಮೆಂಟ್ ಹಾಕಿದ್ದರು. ಕೆ.ಆರ್ ಶೆಟ್ಟಿ ಅಡ್ಯಾರ್ ಪದವು ಮತ್ತು ಶ್ಯಾಮಸುದರ್ಶನ ಭಟ್ ಅವಹೇಳಕಾರಿಯಾಗಿ ಬರೆದಿದ್ದರು.
ತನ್ನನ್ನು ಟ್ರೋಲ್ ಮಾಡಿದ ಬಗ್ಗೆ ಟೀಕಿಸಿದ್ದ ಪ್ರತಿಭಾ ಅವರು, ಇಂಥ ಟ್ರೋಲ್ ಗಳಿಗೆಲ್ಲ ಹೆದರಲ್ಲ. ಆದರೆ, ಅವಹೇಳನ ಮಾಡಿದವರನ್ನು ಬಿಡುವುದಿಲ್ಲ. ಕೇಸು ದಾಖಲಿಸುತ್ತೇನೆ. ಅವರ ಮನೆಗೇ ಹೋಗಿ ಅವರಿಗೆ ಅಕ್ಕ, ತಂಗಿ, ತಾಯಂದಿರು ಇದ್ದಾರೆಯೇ ನೋಡುತ್ತೇನೆ ಎಂದು ಹೇಳಿದ್ದರು. ಇದರ ಬೆನ್ನಲ್ಲೇ ಇಬ್ಬರು ಆರೋಪಿಗಳು ಕೂಡ ತಲೆಮರೆಸಿಕೊಂಡಿದ್ದಾರೆ. ಶ್ಯಾಮಸುದರ್ಶನ್ ಬಂಧನಕ್ಕೆ ಕಾಂಗ್ರೆಸ್ ಸೇರಿದಂತೆ ವಿವಿಧ ಸಂಘಟನೆಗಳು ಆಗ್ರಹ ಮಾಡಿದ್ದು, ಒಬ್ಬ ಬಿಲ್ಲವ ಮಹಿಳೆಗಾದ ಅವಮಾನವನ್ನು ಸಹಿಸುವುದಿಲ್ಲ ಎಂದು ಹೇಳಿದ್ದವು.
ಪುತ್ತೂರು ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಬೆಳ್ತಂಗಡಿ ಮಾಜಿ ಶಾಸಕ ವಸಂತ ಬಂಗೇರ ಸೇರಿದಂತೆ ಹಲವು ನಾಯಕರು ಪ್ರತಿಭಟನೆ ಎಚ್ಚರಿಕೆಯನ್ನೂ ನೀಡಿದ್ದಾರೆ. ಹೀಗಾಗಿ ಆರೋಪಿಗಳ ಪತ್ತೆಗಾಗಿ ಕಮಿಷನರ್ ಶಶಿಕುಮಾರ್ ಮೂರು ಪ್ರತ್ಯೇಕ ಪೊಲೀಸ್ ತಂಡಗಳನ್ನು ರಚಿಸಿದ್ದಾರೆ.





