ದೀಪಾವಳಿ ವಿಶೇಷ: ದಿವ್ಯ ಶಕ್ತಿಯ ಹಣತೆ ಹಚ್ಚೋಣ ಬನ್ನಿ..
ಲೇಖನ: ಕಾವ್ಯ ರಾಧಾಕೃಷ್ಣ ಕೆದ್ಕಾರ್
ಹಣತೆ ಹಚ್ಚುವ ಬನ್ನಿ.. ಕತ್ತಲೆಯ ದೂರ ತಳ್ಳುತ್ತಾ..ಮನವ ಬೆಳಗುವ ಬನ್ನಿ.. ಅಹಮಿನ ಕೊಳೆಯ ತೊಳೆಯುತ್ತಾ…ಮಾನವರಾಗೋಣ ಬನ್ನಿ ಪ್ರೀತಿ, ಸ್ನೇಹವನ್ನು ಹಂಚುತ್ತಾ, ಶ್ರೀದೇವರ ಕಾಣೋಣ ಬನ್ನಿ ನಮ್ಮ ಕರ್ತವ್ಯವ ಮಾಡುತ್ತಾ..ಇರುವಷ್ಟು ದಿನ ನಾವಿಲ್ಲಿ ನಗುವಿನ ನಗುವನ್ನು ಧರಿಸುವ ಬೆಳಗುವ ದೀಪದ ಪ್ರಖರತೆಯಲ್ಲಿ ಮುಖವಾಡ ಸರಿಸಿ ಬದುಕುವ…
ತನ್ನ ಕಾಲ ಬಳಿ ಕತ್ತಲಿದ್ದರೂ ಜಗತ್ತನ್ನು ಬೆಳಗುವ ಶಕ್ತಿ ಇರುವುದು ಒಂದು ಪುಟ್ಟ ಹಣತೆಗೆ ಮಾತ್ರ. ಅಂದಕಾರವನ್ನು ಓಡಿಸಿ, ಜ್ಞಾನ ಮತ್ತು ಸಮೃದ್ಧಿಯನ್ನು ನೀಡುವುದು ಬೆಳಕು. ಬಾಳಿನ ಕತ್ತಲೆಯನ್ನು ತೆಗೆದು ಸುಂದರ ಜೀವನವನ್ನು ನೀಡು ಎಂದು ಲಕ್ಷ್ಮಿ ದೇವಿಗೆ ಮೊರೆ ಇಡುವ ಹಬ್ಬ ದೀಪಾವಳಿ. ಹಾಗಾಗಿಯೇ ಮನೆಯ ತುಂಬ ಹಣತೆಯ ಬೆಳಕನ್ನು ಚಲ್ಲಿ ಹೊಸ ವಾತಾವರಣವನ್ನು ಸೃಷ್ಟಿಸುವ ಪ್ರಯತ್ನ ಮಾಡುತ್ತೇವೆ. ಎಣ್ಣೆ ದೀಪದ ಬದಲಿಗೆ ವಿದ್ಯುತ್ ದೀಪವನ್ನೇ ಬೆಳಗಿ, ಬೆಳಕಿನ ಹೊಳೆ ಹರಿಸಬಹುದು. ಆದರೆ ಎಣ್ಣೆಯಿಂದ ತುಂಬಿಕೊಂಡು ನವಿರಾದ ಭತ್ತಿಯ ಮೂಲಕ ಬೆಳಕನ್ನು ಚೆಲ್ಲುವ ಹಣತೆಯ ಶ್ರೇಷ್ಠತೆಯೇ ಬೇರೆ. ಪುಟ್ಟ ಹಣತೆಯಾದರೂ ಅದರಿಂದಾಗುವ ಪ್ರಯೋಜನಗಳು ಹಲವಾರು. ಅದಕ್ಕಾಗಿಯೇ ದೀಪಾವಳಿ ಎನ್ನುವ ಪವಿತ್ರ ದಿನದಂದು ಹಣತೆಯನ್ನು ಬೆಳಗಬೇಕು ಎನ್ನುವುದು.
ಅಜ್ಞಾನವನ್ನು ಹೋಗಲಾಡಿಸಿ ಜ್ಞಾನದ ಜ್ಯೋತಿ ಬೆಳಗುವ ಹಬ್ಬ ದೀಪಾವಳಿ. ಕತ್ತಲೆಯಿಂದ ಬೆಳಕಿನೆಡೆಗೆ ಕೊಂಡೊಯ್ಯವ ಶಕ್ತಿ ಹೊಂದಿರುವ ದೀಪಾವಳಿ ದೀಪಗಳ ಹಬ್ಬದ ಸೊಬಗು ನೋಡುವುದೇ ಚಂದ. ಮನೆ ಮತ್ತು ಮನಗಳಲ್ಲಿ ಬೆಳಗುವ ಹಬ್ಬ. ಹಣತೆಯ ಪ್ರಖರತೆಯನ್ನು ಎಲ್ಲೆಡೆ ಪಸರಿಸಿ ಜೀವನದಲ್ಲಿ ನಗುವನ್ನು ತರಿಸುವ ಹಬ್ಬ. ಗ್ರಾಮೀಣ ಪ್ರದೇಶದಲ್ಲಿ ಸಾಂಪ್ರದಾಯಿಕವಾಗಿ ಆಚರಿಸ್ಪಡುವ ಹಬ್ಬ ದೀಪಾವಳಿ. ಕೃಷಿ ಪ್ರಧಾನ ಸಂಸ್ಕೃತಿಯ ಹಬ್ಬ ಅಂತನೂ ನಾವು ಕರೆಯುತ್ತೇವೆ. ಪ್ರಕೃತಿಯನ್ನು ಪೂಜಿಸುವ ಹಬ್ಬ. ಮನೆಯ ಮುಂದೆ ಮತ್ತು ದೇವರಗೂಡಿನಲ್ಲಿ ಹಚ್ಚುವ ದೀಪಕ್ಕೆ ಬಹಳಷ್ಟು ಅರ್ಥವನ್ನು ನಮ್ಮ ಹಿರಿಯರು ಕಂಡುಕೊಂಡಿದ್ದಾರೆ. ದೀಪಾವಳಿಯಂದು ಹಚ್ಚುವ ದೀಪವು ಮನೆ-ಮನವನ್ನು ಬೆಳಗುವುದಲ್ಲದೆ, ಮನದ ಅಂಧಕಾರವನ್ನು ಸಹ ಹೊಡೆದೋಡಿಸುತ್ತದೆ.

ಹಬ್ಬ-ಹರಿದಿನಗಳಲ್ಲಿ ಹಚ್ಚುವ ಹಣತೆಗೆ ವಿಶೇಷ ಮಹತ್ವ ಇದೆ. ಕ್ಯಾಂಡಲ್ ಬದಲಿಗೆ ಮಣ್ಣಿನಿಂದ ಮಾಡಿದ ಹಣತೆಗಳಿಗೆ ಬಹಳ ಪ್ರಾಮುಖ್ಯತೆ. ಸಾಂಪ್ರದಾಯಿಕ ಹಣತೆಗಳು ಅಂಗೈಯಾಕಾರದಷ್ಟರ ಗಾತ್ರದಲ್ಲಿ ನಿಮಗೆ ಮಾರುಕಟ್ಟೆಗಳಲ್ಲಿ ಸಿಗಲಿದೆ. ಹಣತೆಗಳಿಗೆ ಎಣ್ಣೆ ಅಥವಾ ತುಪ್ಪವನ್ನು ತುಂಬಿ ಹತ್ತಿ ಬತ್ತಿಯನ್ನಿಟ್ಟು ದೇವರ ಉಪಸ್ಥಿತಿಯನ್ನು ಕಾಣುತ್ತೇವೆ. ಅದೇ ಕಲ್ಪನೆಯಲ್ಲಿ ಮನೆಯ ಸುತ್ತಲೂ, ಮೂಲೆ ಮೂಲೆಗಳಲ್ಲಿ ಹಣತೆಗಳನ್ನು ಹಚ್ಚಿ ಬೆಳಗಿಸಲಾಗುತ್ತದೆ. ದೀಪಾವಳಿಯ ಆ ಸಂಜೆ ದೀಪಗಳನ್ನು ಹಚ್ಚಿ ದೇವರನ್ನು ಮನೆಗೆ ಆಹ್ವಾನಿಸಿಕೊಳ್ಳುತ್ತೇವೆ ಎಂಬ ನಂಬಿಕೆ ಜನರದ್ದು. ಹಣತೆಗಳಿಂದ ಮೂಡುವ ಬೆಳಕಿನ ಚಿತ್ತಾರ ಮತ್ತು ಅದರಿಂದ ಹೊರಸೂಸುವ ಬೆಳಕನ್ನು ನೋಡುವುದೇ ಚೆಂದ.
ಇನ್ನು ದೀಪಾವಳಿಯ ಸಂದರ್ಭದಲ್ಲಿ ಸಂಭ್ರಮವನ್ನು ಇನ್ನಷ್ಟು ಹೆಚ್ಚಿಸುವಲ್ಲಿ ನಾನಾ ಕಸರತ್ತುಗಳನ್ನು ನಾವು ಮಾಡುತ್ತೇವೆ. ಹಣತೆಯಿಂದ ನಾನಾ ರೀತಿಯಾಗಿ ಅಲಂಕಾರ ಮಾಡಿ ಸಣ್ಣ ಹಣತೆಗಳನ್ನು ವೃತ್ತಾಕಾರದಲ್ಲಿ ಜೋಡಿಸಿ, ಅವುಗಳ ಮಧ್ಯೆ ದೊಡ್ಡ ಹಣತೆ ಅಥವಾ ದೀಪವನ್ನಿಟ್ಟು ಅಲಂಕಾರ ಮಾಡುವುದು, ಇಲ್ಲವೇ ಮನೆಯ ಮುಂದೆ ಹಾಗೂ ದೇವರ ಕೋಣೆಯ ಎದುರು ರಂಗೋಲಿ ಹಾಕಿ ಅದಕ್ಕೆ ಬಣ್ಣ ತುಂಬಿ ಎಲೆಗಳ ಮೇಲೆ ಪುಟ್ಟ ಪುಟ್ಟ ಹಣತೆಯನ್ನು ಇಟ್ಟು ಅಲಂಕಾರ ಮಾಡಿದರೆ ನೋಡುವುದಕ್ಕೆ ಚೆನ್ನಾಗಿ ಕಾಣುತ್ತದೆ. ಹೂವಿನ ದಳಗಳಿಂದ ರಂಗೋಲಿ ಹಾಕಿ ಅಲ್ಲಲ್ಲಿ ಹಣತೆಯನ್ನು ಜೋಡಿಸುವಿದರಿಂದಲೂ ಸುಂದರವಾಗಿ ಕಾಣುತ್ತವೆ. ದೀಪಾವಳಿ ಸಂದರ್ಭಕ್ಕೆಂದು ನಾನಾ ಬಗೆಯ ಗೂಡು ದೀಪಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಅವನ್ನು ಮನೆಯ ಆಯಕಟ್ಟಿನ ಜಾಗದಲ್ಲಿ ನೇತುಹಾಕುವುದರಿಂದ ನೋಡಲು ಆಕರ್ಷಕವಾಗಿ ಕಾಣುತ್ತದೆ. ಬಣ್ಣ ಬಣ್ಣದ ಕ್ಯಾಂಡಲ್‌ಗಳನ್ನು ಬೇಕಾದರೂ ಹೊತ್ತಿಸಬಹುದು, ನೀರಿನಲ್ಲಿ ತೇಲಿಬಿಟ್ಟರೂ ಉರಿಯುವ ಕ್ಯಾಂಡಲ್‌ಗಳಿಂದಲೂ ಅಲಂಕಾರ ಮಾಡಬಹುದು.
ಏನೇ ಆಗಲಿ ಬೆಳಕನ್ನು ಸಂಭ್ರಮಿಸುವಷ್ಟರಲ್ಲಿ ಕತ್ತಲು ಕವಿಯುತ್ತದೆ. ಬೆಳಕು ಹೇಗೆ ಶಾಶ್ವತವಲ್ಲವೋ ಹಾಗೆ ಕತ್ತಲೆಯೂ ಒಂದು ತಾತ್ಕಾಲಿಕ ಸ್ಥಿತಿ. ಕತ್ತಲ ಗರ್ಭದಲ್ಲಿ ಬೆಳಕು ಹುಟ್ಟಿದರೆ ಬೆಳಕನ್ನು ನುಂಗಿ ಕತ್ತಲು ಬಂದೆರಗುತ್ತದೆ. ಮತ್ತೆ ಬೆಳಕಿನ ಹುಟ್ಟಿಗೆ ಕತ್ತಲಕುಲುಮೆ. ಹಾಗಾಗಿ ಕತ್ತಲೆಯೇ ಬೆಳಕಿನ ಬೇರು. ಅದೇ ಬೆಳಕಿನ ತವರು. ನೆರಳಿನ ಹಿಂದೆ ಬೆಳಕಿದೆ. ಯಾವ ಕತ್ತಲೆಗೂ ಬೆಳಕನ್ನು ತಡೆಯುವ ಶಕ್ತಿ ಇಲ್ಲ. ಎರಡರ ಕಾದಾಟದಲ್ಲಿ ಯಾರಿಗೂ ಸೋಲಿಲ್ಲ, ಗೆಲುವಿಲ್ಲ. ಪರಸ್ಪರ ಸ್ಥಾನಪಲ್ಲಟಗೊಳ್ಳುತ್ತಿದ್ದಂತೆ ದಿನಗಳು ಬದಲಾಗುತ್ತವೆ.
ಕತ್ತಲು-ಬೆಳಕಿನಾಚೆಗೆ, ನಮ್ಮಲ್ಲಿ ಮಾನವೀಯತೆ ಎಂಬುವುದು ಬೆಳಗಬೇಕು. ದೀಪಾವಳಿಯನ್ನು ಎದುರುಗೊಳ್ಳುವ ನೆಪದಲ್ಲಿ ನಮ್ಮ ಒಳಗನ್ನು ಬೆಳಗಿಕೊಂಡು, ನಾವೇ ಬೆಳಕಾಗುತ್ತಾ ಬದುಕಲ್ಲಿ ಆಲಸ್ಯ, ಭೇದಭಾವ, ರಾಗದ್ವೇಷಗಳ ಕತ್ತಲನ್ನು ಕಳೆಯಬೇಕು. ಆ ಜಾಗದಲ್ಲಿ ಪ್ರೀತಿ, ಸಹಬಾಳ್ವೆ, ವೈಚಾರಿಕತೆಯೆಂಬ ಅರಿವಿನ ದೀಪಗಳನ್ನು ಹೆಚ್ಚೆಚ್ಚು ಹಚ್ಚುತ್ತಾ ಬೆಳಕನ್ನು ಹಂಚುವ ಕೆಲಸವಾಗಬೇಕು. ಹಾಗೆ, ಬಾಳ್ವೆಯೇ ಬೆಳಕಾಗಿ ಜಗ ಬೆಳಗಲಿ. ಎಲ್ಲರೆದೆಗಳಲ್ಲಿ ಬೆಚ್ಚನೆಯ ಭಾವ ಉಕ್ಕಲಿ. ನಮ್ಮನ್ನು ಸಾತ್ವಿಕ ಬದುಕಿನ, ಬೆಳಗಿನ ಘಮಲು ಸದಾಕಾಲ ಮುತ್ತಿರಲಿ.




