May 11, 2026

ಬೆಳ್ತಂಗಡಿ: ಕ್ಯಾಂಟೀನ್ ಹೆಸರಿನಲ್ಲಿ ವೇಶ್ಯಾವಾಟಿಕೆ: ಮೂವರು ಆರೋಪಿಗಳ ಬಂಧನ, ಮಹಿಳೆಯ ರಕ್ಷಣೆ

0
image_editor_output_image233587879-1778492308827.jpg

ಬೆಳ್ತಂಗಡಿ: ಮೆಸ್ಕಾಂ ಕಚೇರಿ ಸಮೀಪದ ಕ್ಯಾಂಟೀನ್ ಒಂದರಲ್ಲಿ ಅಕ್ರಮವಾಗಿ ನಡೆಸಲಾಗುತ್ತಿದ್ದ ವೇಶ್ಯಾವಟಿಕೆ ಜಾಲವನ್ನು ಬೆಳ್ತಂಗಡಿ ಪೊಲೀಸರು ಭೇದಿಸಿದ್ದಾರೆ.

ಖಚಿತ ಮಾಹಿತಿ ಮೇರೆಗೆ ಭಾನುವಾರ ನಡೆಸಿದ ಈ ದಾಳಿಯಲ್ಲಿ ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ಓರ್ವ ಮಹಿಳೆಯನ್ನು ರಕ್ಷಿಸಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ಯಾಂಟೀನ್ ಮಾಲೀಕ, ಪೊಯ್ಯಗುಡ್ಡೆ ನಿವಾಸಿ ಸುಂದರ್ ಶೆಟ್ಟಿ (55), ನಾವೂರು ನಿವಾಸಿ ಹುಸ್ಮಾನ್ (38) ಮತ್ತು ತಣ್ಣೀರುಪಂತ ಗ್ರಾಮದ ಕಲ್ಲೇರಿ ನಿವಾಸಿ ಹೈದಾರ್ (45) ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿ ಸುಂದರ್ ಶೆಟ್ಟಿ ಕಳೆದ ಸುಮಾರು 20 ವರ್ಷಗಳಿಂದ ಬೆಳ್ತಂಗಡಿಯ ಮೆಸ್ಕಾಂ ಕಚೇರಿ ಬಳಿ ಕ್ಯಾಂಟೀನ್ ನಡೆಸುತ್ತಿದ್ದನು. ಈ ಕ್ಯಾಂಟೀನ್‌ಗೆ ಪ್ರತಿ ಭಾನುವಾರ ರಜೆ ಇರುತ್ತಿತ್ತು. ಸಾರ್ವಜನಿಕವಾಗಿ ರಜೆ ಎಂದು ತೋರಿಸಿಕೊಳ್ಳುತ್ತಿದ್ದರೂ, ಒಳಗಡೆ ವ್ಯವಸ್ಥಿತವಾಗಿ ಬೆಡ್‌ರೂಂ ಹಾಗೂ ಶೌಚಾಲಯದ ಸೌಕರ್ಯ ಮಾಡಿಕೊಂಡು ಗುಪ್ತವಾಗಿ ವೇಶ್ಯಾವಟಿಕೆ ದಂಧೆ ನಡೆಸಲಾಗುತ್ತಿತ್ತು ಎಂಬುದು ತನಿಖೆಯಿಂದ ತಿಳಿದುಬಂದಿದೆ.

ಈ ಅಕ್ರಮ ಚಟುವಟಿಕೆಯ ಕುರಿತು ಬೆಳ್ತಂಗಡಿ ಪೊಲೀಸರಿಗೆ ಲಭಿಸಿದ ಖಚಿತ ಮಾಹಿತಿಯ ಮೇರೆಗೆ, ಮೇ 10ರಂದು ಮಧ್ಯಾಹ್ನ 3 ಗಂಟೆಗೆ ಪೊಲೀಸರ ತಂಡ ದಾಳಿ ನಡೆಸಿದೆ. ದಾಳಿಯ ವೇಳೆ ದಂಧೆಯಲ್ಲಿ ತೊಡಗಿದ್ದ ಮೂವರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದ್ದು, 29 ವರ್ಷದ ಸಂತ್ರಸ್ತ ಮಹಿಳೆಯನ್ನು ರಕ್ಷಿಸಲಾಗಿದೆ. ಸ್ಥಳದಿಂದ ನಗದು ಹಣ, ಮೊಬೈಲ್ ಫೋನ್‌ಗಳು ಹಾಗೂ ಇನ್ನಿತರ ಆಕ್ಷೇಪಾರ್ಹ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಬೆಳ್ತಂಗಡಿ ಉಪವಿಭಾಗದ ಡಿವೈಎಸ್‌ಪಿ ರೋಹಿಣಿ ಸಿ.ಕೆ. ಅವರ ಮಾರ್ಗದರ್ಶನದಲ್ಲಿ, ಬೆಳ್ತಂಗಡಿ ವೃತ್ತ ನಿರೀಕ್ಷಕ ರವಿ ಬಿ.ಎಸ್. ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಸಬ್ ಇನ್ಸ್‌ಪೆಕ್ಟರ್ ಸಿಕಂದರ್ ಪಾಷಾ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿದ್ದರು. ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Leave a Reply

Your email address will not be published. Required fields are marked *

error: Content is protected !!