March 23, 2026

ಟ್ರಕ್‌‌, ಬಸ್ ನಡುವೆ ಭೀಕರ ರಸ್ತೆ ಅಪಘಾತ: 14 ಮಂದಿ ದಾರುಣವಾಗಿ ಸಾವು, 35 ಮಂದಿಗೆ ಗಾಯ

0
image_editor_output_image-2669207-1666414993923.jpg

ರೇವಾ: ಟ್ರಕ್‌‌ ಮತ್ತು ಬಸ್ ಢಿಕ್ಕಿಯಾಗಿ 14 ಮಂದಿ ದಾರುಣವಾಗಿ ಮೃತಪಟ್ಟ ಘಟನೆ ಮಧ್ಯಪ್ರದೇಶದ ರೇವಾ ಜಿಲ್ಲೆಯ ಸೊಹಗಿ ಪರ್ವತದ ಬಳಿ ರಾಷ್ಟ್ರೀಯ ಹೆದ್ದಾರಿ-30 ರಲ್ಲಿ ಶುಕ್ರವಾರ ತಡರಾತ್ರಿ ನಡೆದಿದೆ. ಘಟನೆಯಲ್ಲಿ 35 ಮಂದಿ ಗಾಯಗೊಂಡಿದ್ದಾರೆ.

ಘಟನೆಯಲ್ಲಿ 11 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದರೆ, ಮೂವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದರು. ಗಾಯಾಳುಗಳನ್ನು ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಾವನ್ನಪ್ಪಿದವರೆಲ್ಲರೂ ಉತ್ತರ ಪ್ರದೇಶ ಮತ್ತು ಬಿಹಾರದವರು ಎನ್ನಲಾಗಿದೆ.

ಬಸ್ ಹೈದರಾಬಾದ್‌ನಿಂದ ರೇವಾ ಮೂಲಕ ಗೋರಖ್‌ಪುರಕ್ಕೆ ಹೋಗುತ್ತಿತ್ತು. ಸೊಹಗಿ ಪರ್ವತದಿಂದ ಕೆಳಗೆ ಇಳಿಯುತ್ತಿದ್ದ ವೇಳೆ ಮುಂಭಾಗದಲ್ಲಿ ಸಂಚರಿಸುತ್ತಿದ್ದ ಟ್ರೇಲರ್‌ಗೆ ಢಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.

ಮಾಹಿತಿ ತಿಳಿದ ತತ್‌ಕ್ಷಣ ರೇವಾ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಬಸ್‌ನಲ್ಲಿ ಸಿಲುಕಿದ್ದ ಪ್ರಯಾಣಿಕರನ್ನು ರಕ್ಷಿಸಿದ್ದಾರೆ.

ಗಾಯಾಳುಗಳನ್ನು ಕೂಡಲೇ ಆಂಬುಲೆನ್ಸ್‌ ಮೂಲಕ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಇವರೆಲ್ಲರೂ ಕಾರ್ಮಿಕರಾಗಿದ್ದು, ದೀಪಾವಳಿ ಹಿನ್ನೆಲೆಯಲ್ಲಿ ತಂತಮ್ಮ ಊರಿಗೆ ತೆರಳುತ್ತಿದ್ದರು ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!