March 24, 2026

ಪಿ ಎಫ್ ಐ ಸಂಘಟನೆ ಮತ್ತು ಅದರ ಸಹವರ್ತಿ ಸಂಘಟನೆಗಳ ಐದು ವರ್ಷ ನಿಷೇಧ: ಕೇಂದ್ರ ಸರಕಾರ ಆದೇಶ

0
image_editor_output_image1073395111-1664333871886

ದೆಹಲಿ: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (Pupular Front of India – PFI) ಹಾಗೂ ಅದರ ಸಹವರ್ತಿ ಸಂಘಟನೆಗಳು ಅಥವಾ ಅಧೀನ ಸಂಘಟನೆಗಳನ್ನು ಕೇಂದ್ರ ಸರ್ಕಾರವು ತಕ್ಷಣದಿಂದ ಜಾರಿಗೆ ಬರುವಂತೆ ಐದು ವರ್ಷಗಳ ಅವಧಿಗೆ ನಿಷೇಧಿಸಿದೆ. ಈ ಸಂಘಟನೆಗಳನ್ನು ‘ಕಾನೂನು ಬಾಹಿರ’ ಎಂದು ಘೋಷಿಸಿದೆ. ಕೇಂದ್ರ ಸರ್ಕಾರದ ಮೂಲಗಳನ್ನು ಆಧರಿಸಿದ ಎಎನ್​ಐ ಸುದ್ದಿ ಸಂಸ್ಥೆಯು ಈ ಸಂಬಂಧ ಟ್ವೀಟ್ ಮಾಡಿದೆ.

ಕರ್ನಾಟಕ ಸೇರಿದಂತೆ ದೇಶದ ವಿವಿಧೆಡೆ ರಾಷ್ಟ್ರೀಯ ತನಿಖಾ ದಳ (National Investigation Agency – NIA) ಅಧಿಕಾರಿಗಳು ಹಾಗೂ ಸ್ಥಳೀಯ ಪೊಲೀಸ್ ಸಿಬ್ಬಂದಿ ಪಿಎಫ್​ಐ ಕಾರ್ಯಕರ್ತರ ಮನೆಗಳ ಮೇಲೆ ದಾಳಿ ನಡೆಸಿದ್ದರು. ನೂರಾರು ಮಂದಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿತ್ತು. ದಾಳಿಯ ಬೆನ್ನಿಗೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾಗ ಅಜಿತ್ ದೋವಲ್ ದೆಹಲಿಯಲ್ಲಿ ಮಹತ್ವದ ಸಭೆ ನಡೆಸಿದ್ದರು. ವಿವಿಧ ಭದ್ರತಾ ಏಜೆನ್ಸಿಗಳ ಮುಖ್ಯಸ್ಥರು ಪಾಲ್ಗೊಂಡಿದ್ದ ಸಭೆಯಲ್ಲಿ ಮುಂದೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಸಭೆಯಲ್ಲಿ ವಿಸ್ತೃತ ಚರ್ಚೆ ನಡೆಯಿತು.

Central Government declares PFI (Popular Front of India) and its associates or affiliates or fronts as an unlawful association with immediate effect, for a period of five years. pic.twitter.com/ZVuDcBw8EL

— ANI (@ANI) September 28, 2022
ಎನ್​ಐಎ, ಜಾರಿ ನಿರ್ದೇಶನಾಲಯ (Enforcement Directorate – ED) ಮತ್ತು ಗುಪ್ತದಳದಿಂದ (Intelligence Bureau – IB) ಸಾಕಷ್ಟು ಮಾಹಿತಿ ಕಲೆಹಾಕಿದ ನಂತರವೇ ಪಿಎಫ್​ಐ ಹಾಗೂ ಎಸ್​ಡಿಪಿಐ ಮೇಲೆ ಕೇಂದ್ರ ಸರ್ಕಾರದ ಏಜೆನ್ಸಿಗಳು ಇಂದು (ಸೆ 22) ದಾಳಿ ನಡೆಸಿದವು. ವಿವಿಧ ರಾಜ್ಯಗಳ ಪೊಲೀಸರ ನೆರವನ್ನೂ ದಾಳಿಯ ವೇಳೆ ಪಡೆಯಲಾಯಿತು. ಪಿಎಫ್​ಐ ಸಂಘಟನೆಯು ತನ್ನನ್ನು ತಾನು ಸಮಾಜೋ-ಧಾರ್ಮಿಕ ಸಂಘಟನೆ ಎಂದು ಕರೆದುಕೊಳ್ಳುತ್ತದೆ. ಈ ಸಂಘಟನೆಯ ಬಗ್ಗೆ ಕೇಂದ್ರ ಮತ್ತು ಹಲವು ರಾಜ್ಯ ಸರ್ಕಾರಗಳು ಇದೀಗ ಕಠಿಣ ನಿಲುವು ತಳೆದಿವೆ. ಉದಯ್​ಪುರ್ ಮತ್ತು ಅಮರಾವತಿ ನಗರಗಳಲ್ಲಿ ನಡೆದ ಶಿರಚ್ಛೇದ ಪ್ರಕರಣಗಳ ಅಪರಾಧಿಗಳಿಗೆ ಪಿಎಫ್​ಐ ನಂಟು ಇದ್ದುದು ಬೆಳಕಿಗೆ ಬಂದ ನಂತರ ಕೇಂದ್ರ ಸರ್ಕಾರವು ಪಿಎಫ್​ಐ ವಿರುದ್ಧ ಮತ್ತಷ್ಟು ಕಠಿಣ ನಿಲುವು ತಳೆಯಿತು.

ಇದೀಗ ಪಿಎಫ್ಐ ಸಂಘಟನೆಯನ್ನು ಕೇಂದ್ರ ಸರ್ಕಾರವು ಕಾನೂನು ಬಾಹಿರ ಎಂದು ಅಧಿಕೃತವಾಗಿ ಘೋಷಿಸಿದ್ದು, ಐದು ವರ್ಷಗಳ ಅವಧಿಗೆ ನಿಷೇಧಿಸುವುದರೊಂದಿಗೆ ಈ ಕಾರ್ಯಾಚರಣೆಯು ಮಹತ್ವದ ಘಟ್ಟ ತಲುಪಿದೆ.

Leave a Reply

Your email address will not be published. Required fields are marked *

error: Content is protected !!