ನಕಲಿ ಏಜೆಂಟ್ ಗಳ ವಂಚನಾ ಜಾಲಕ್ಕೆ ಸಿಲುಕಿದ 12 ಕನ್ನಡಿಗರ ಸಹಿತ 16 ಭಾರತೀಯರು: ಸಮಸ್ತ ಇಸ್ಲಾಮಿಕ್ ಸೆಂಟರ್ (SIC) ರಿಯಾದ್ ನೆರವಿನಿಂದ ತವರು ತಲುಪಿದ ಎಲ್ಲಾ 16 ಸಂತ್ರಸ್ತರು
ರಿಯಾದ್: ಹಲವಾರು ತಿಂಗಳು ಸಂಬಳ ಮತ್ತು ಅನುಕೂಲತೆಗಳು ಸಿಗದೆ ಸೌದಿ ಅರೇಬಿಯಾದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ 12 ಜನ ಕನ್ನಡಿಗರು ಸೇರಿದಂತೆ 16 ಭಾರತೀಯರ ನೆರವಿಗೆ ಬಂದು ಅವರನ್ನು ಊರಿಗೆ ಕಳುಹಿಸಲು ಸಮಸ್ತ ಇಸ್ಲಾಮಿಕ್ ಸೆಂಟರ್ (SIC) ರಿಯಾದ್ ಸಮಿತಿ ನೆರವಾಯಿತು. ನಕಲಿ ಏಜೆಂಟರ ಮಾತಿಗೆ ಮರುಳಾಗಿ ಊರಿನಿಂದ ಲಕ್ಷಗಟ್ಟಲೆ ಹಣ ಪಾವತಿಸಿ ಉತ್ತಮ ಉದ್ಯೋಗಾವಕಾಶದ ಕನಸು ಹೊತ್ತು ಬಂದ ಭಾರತೀಯರಿಗೆ ಒಪ್ಪಿಕೊಂಡಂತಹ ಸರಿಯಾದ ಕೆಲಸ, ಸಂಬಳ, ಆಹಾರ ಮತ್ತು ಅನುಕೂಲತೆಗಳನ್ನು ನೀಡದೆ ಆರು ತಿಂಗಳಿಗಿಂತಲೂ ಮೇಲ್ಪಟ್ಟು ಸತಾಯಿಸುತ್ತಿದ್ದ ವಿಷಯ ತಿಳಿದು SIC ತಂಡ ಅವರ ನೆರವಿಗೆ ಧಾವಿಸಿತು.
SICಯ ಸಹಕಾರದಿಂದ ಕಾರ್ಮಿಕ ಇಲಾಖೆಯಲ್ಲಿ ಕೇಸು ದಾಖಲಿಸಿದ್ದರ ಪರಿಣಾಮ ಕಂಪನಿ ಮಾಲಕರು ನೌಕರರ ಮೇಲೆ ಹಾಕಿದ್ದ ಹೂರೂಬ್ (ನಾಪತ್ತೆ) ಪ್ರಕರಣವನ್ನು ಹಿಂತೆಗೆದು ಅವರನ್ನು ಊರಿಗೆ ಹಿಂತಿರುಗಲು ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಮಾಡಿದರು. ಈಗ ಎಲ್ಲಾ 16 ಭಾರತೀಯರು ಊರು ಸೇರಿದ್ದಾರೆ. ನೌಕರರಿಗೆ ಆಹಾರ, ಕಾನೂನು ನೆರವು ನೀಡಲು ರಿಯಾದಿನ ಸಾಮಾಜಿಕ ಸಂಘಟನೆ KMCC ಕೂಡ ಕೈ ಜೋಡಿಸಿತ್ತು.
ರಿಯಾದ್ ಸಮಿತಿಯ ಗೌರವಾಧ್ಯಕ್ಷರಾದ ಮೊಹಮ್ಮದ್ ಆರಿಫ್ ಬಾಖವಿ ನೆಲ್ಯಾಡಿ, ಅಧ್ಯಕ್ಷರಾದ ಬಶೀರ್ ಅರಂಬೂರು, ಛೇರ್ಮನ್ ಹಸನ್ ಹಾಜಿ ಅರ್ಕಾನ, ವೈಸ್ ಛೇರ್ಮನ್ ಇಬ್ರಾಹಿಂ ಮಂಜೇಶ್ವರ, ಕಾರ್ಯದರ್ಶಿ ಸುನೀರ್ ಕೂರ್ನಡ್ಕ ಮೊದಲಾದವರು ಈ ಕಾರ್ಯಕ್ಕೆ ನೇತೃತ್ವ ನೀಡಿದ್ದರು.
“ಊರಿನಲ್ಲಿ ನಕಲಿ ವೀಸಾ ಏಜೆಂಟರುಗಳ ಹಾವಳಿಯಿಂದಾಗಿ ಮನೆ, ಸ್ವತ್ತು ಮಾರಿ, ಸಾಲ ಮಾಡಿ ಲಕ್ಷಗಟ್ಟಲೆ ಹಣ ಕೊಟ್ಟು ವೀಸಾ ಪಡೆದು ಸೌದಿ ಅರೇಬಿಯಾಕ್ಕೆ ಬಂದು ಸಂಕಷ್ಟಕ್ಕೆ ಸಿಲುಕುವವರ ಸಂಖ್ಯೆ ಹೆಚ್ಚುತ್ತಿದೆ. ಸೌದಿ ಅರೇಬಿಯಾದಲ್ಲಿ ಉತ್ತಮ ಕಂಪೆನಿಗಳಲ್ಲಿ ಹಲವಾರು ಉದ್ಯೋಗಾವಕಾಶಗಳು ಲಭ್ಯವಿರುತ್ತದೆ, ಈ ಉದ್ಯೋಗಗಳಿಗೆ ಕಂಪೆನಿಗಳು ನಿಯೋಜಿಸಿದ ಭಾರತದ ವಿವಿಧ ನಗರಗಳಲ್ಲಿರುವ ಸೌದಿ ಸರ್ಕಾರದ ಲೈಸನ್ಸ್ ಪಡೆದಿರುವ ಅಧಿಕೃತ ಏಜೆನ್ಸಿಗಳ ಮೂಲಕ ಉಚಿತ ಆಯ್ಕೆ ಪ್ರಕ್ರಿಯೆಗಳು ನಡೆಯುತ್ತದೆ. ಮಾಹಿತಿ ಮತ್ತು ಮಾರ್ಗದರ್ಶನದ ಕೊರತೆಯಿಂದಾಗಿ ಅನಧಿಕೃತ ಬೀದಿ ಏಜೆಂಟ್ ಗಳ ಮೋಸಕ್ಕೆ ಬಲಿಯಾಗದೆ ಅಧೀಕೃತ ಏಜೆನ್ಸಿಗಳ ಮೂಲಕ ಮಾತ್ರ ಗಲ್ಫ್ ಉದ್ಯೋಗಕ್ಕೆ ಬರಬೇಕು. ಸೌದಿಯಲ್ಲಿ ಕಾರ್ಮಿಕರ ಹಕ್ಕನ್ನು ಸಂರಕ್ಷಿಸಲು ಕಾರ್ಮಿಕ ಇಲಾಖೆ, ನ್ಯಾಯಾಲಯಗಳು ಅತ್ಯಂತ ಕ್ರಿಯಾತ್ಮಕ ಸುಧಾರಣೆಗಳನ್ನು ತಂದಿದೆ. ಆದ್ದರಿಂದ ಮಾಲೀಕರ ಕಡೆಯಿಂದ ತೊಂದರೆ ಅನುಭವಿಸುತ್ತಿರುವವರು ನೇರವಾಗಿ ಕಾರ್ಮಿಕ ಇಲಾಖೆಯನ್ನು ಸಂಪರ್ಕಿಸಬಹುದಾಗಿದೆ” ಎಂದು SIC ಪದಾಧಿಕಾರಿಗಳು ತಿಳಿಸಿದ್ದಾರೆ.





