ಅಧಿಕಾರಕ್ಕೆ ಬರುವುದಕ್ಕಿಂತಲೂ ಕೋಮುವಾದಿ ಶಕ್ತಿಗಳನ್ನು ದಮನ ಮಾಡುವುದೇ ಮುಖ್ಯ: ಸಿದ್ದರಾಮಯ್ಯ
ಬೆಂಗಳೂರು: ಮುಂದಿನ ದಿನಗಳಲ್ಲಿ ನಾವು ಅಧಿಕಾರಕ್ಕೆ ಬರುವುದಕ್ಕಿಂತಲೂ ಕೋಮುವಾದಿ ಶಕ್ತಿಗಳನ್ನು ದಮನ ಮಾಡುವುದೇ ಮುಖ್ಯವಾಗಿದೆ ಎಂದು ವಿಧಾನಸಭೆಯ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ತಿಳಿಸಿದ್ದಾರೆ.
ಶುಕ್ರವಾರ ನಗರದ ಗಾಂಧಿಭವನದಲ್ಲಿ ಪತ್ರಕರ್ತ ನವೀನ್ ಸೂರಿಂಜೆ ಸಂಪಾದಕತ್ವದ ಸದನದಲ್ಲಿ ಶ್ರೀರಾಮರೆಡ್ಡಿ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದಿನನಿತ್ಯ ದಲಿತರು, ಅಲ್ಪಸಂಖ್ಯಾತರು, ಮಹಿಳೆಯರು, ಕಾರ್ಮಿಕರು, ರೈತರು ಆತಂಕದಲ್ಲಿ ಬದುಕು ಸಾಗಿಸುತ್ತಿದ್ದಾರೆ. ಹೀಗಾಗಿ, ಕೋಮುವಾದಿ ಶಕ್ತಿಗಳನ್ನು ದಮನ ಮಾಡುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.
ಕೇಂದ್ರ ಸರಕಾರದ ರೈತ ವಿರೋಧಿ ನೀತಿಗಳಿಂದಲೇ ಕಾಲೇಜು ವ್ಯಾಸಂಗವೂ ಪೂರ್ಣಗೊಳಿಸದ ಉದ್ಯಮಿ ಗೌತಮ್ ಅದಾನಿ ಜಗತ್ತಿನ ಮೂರನೇ ಶ್ರೀಮಂತ ಆಗಿದ್ದಾನೆ. ಜಮೀನು ಖರೀದಿ ಸಂಬಂಧ ಅನೇಕ ತಿದ್ದುಪಡಿ ಮಾಡಿ, ಕೃಷಿಯೇತರ ಚಟುವಟಿಕೆಗಳಿಗೆ ನೀಡಲಾಗುತ್ತಿದೆ. ಉಳ್ಳವನೇ ಭೂಮಿಯ ಒಡೆಯ ಎನ್ನುವ ಯೋಜನೆಯನ್ನೆ ತಂದಿದ್ದಾರೆ ಎಂದು ಸರಕಾರವನ್ನು ಟೀಕಿಸಿದರು.
ಬಂಡವಾಳಶಾಹಿಗಳ ಪರ ಕೇಂದ್ರ ಮತ್ತು ರಾಜ್ಯ ಸರಕಾರಗಳು ಕೆಲಸ ಮಾಡುತ್ತಿವೆ. ಇದಕ್ಕಿಂತ ಹೆಚ್ಚಾಗಿ ಕೋಮುವಾದಿ ಶಕ್ತಿಗಳು ಬೆಳೆಯುತ್ತಿವೆ. ಇದರ ವಿರುದ್ಧ ನಾವು ಜಾಗೃತಿ ಮೂಡಿಸುವ ಜೊತೆಗೆ ದಮನ ಮಾಡುವ ಕೆಲಸ ಮಾಡಬೇಕಾಗಿದೆ ಎಂದು ಅವರು ತಿಳಿಸಿದರು.
ಬಿಜೆಪಿ ನಾಯಕರಿಗೆ ಸಂವಿಧಾನ, ಪ್ರಜಾಪ್ರಭುತ್ವ, ಸಮಾನತೆ ಮೇಲೆ ನಂಬಿಕೆಯೇ ಇಲ್ಲ. ಅವರಿಗೆ ಸರ್ವಾಧಿಕಾರದ ವ್ಯವಸ್ಥೆ ರೂಪಗೊಳ್ಳಬೇಕಾಗಿದೆ. ಸಂವಿಧಾನ ವಿರೋಧಿ ನಡೆಗಳ ವಿರುದ್ಧ ನಾವು ಎಲ್ಲರೂ ಜತೆಗೂಡಿ ಧ್ವನಿಗೂಡಿಸಬೇಕು ಎಂದು ಅವರು ಹೇಳಿದರು.
ಕಮ್ಯೂನಿಸ್ಟ್ ನಾಯಕರು ಸ್ವಲ್ಪ ಖಾರವಾಗಿ ಮಾತನಾಡುತ್ತಾರೆ. ಆದರೆ, ಅವರು ಸ್ವಾರ್ಥಿಗಳಲ್ಲ. ಹಲವು ಸಮಸ್ಯೆಗಳಿಗೆ ಬೀದಿಗಿಳಿದು ಹೋರಾಟ ನಡೆಸುತ್ತಾರೆ ಎಂದ ಅವರು, ರಾಜಕಾರಣಿಗಳು ಜನರಿಗೆ ಸತ್ಯ ಹೇಳಬೇಕು ಎಂದು ಶ್ರೀರಾಮರೆಡ್ಡಿ ಪದೇ ಪದೇ ಹೇಳುತ್ತಿದ್ದರು. ಅವರ ಮಾರ್ಗದರ್ಶನದಲ್ಲಿ ಜನಪ್ರತಿನಿಧಿಗಳು ನಡೆಯಬೇಕು ಎಂದು ಸಿದ್ದರಾಮಯ್ಯ ಹೇಳಿದರು.





