ಸಚಿವ ಉಮೇಶ್ ವಿಶ್ವನಾಥ್ ಕತ್ತಿ ಹೃದಯಾಘಾತದಿಂದ ನಿಧನ
ಬೆಂಗಳೂರು: ಸಚಿವ ಉಮೇಶ್ ವಿಶ್ವನಾಥ್ ಕತ್ತಿ(೬೧) ಅವರಿಗೆ ಹೃದಯಾಘಾತವಾಗಿದ್ದು, ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ನಿಧನ ಹೊಂದಿದ್ದಾರೆಂದು ತಿಳಿದುಬಂದಿದೆ.
ಸಚಿವ ಉಮೇಶ್ ಕತ್ತಿ ಡಾಲರ್ಸ್ ಕಾಲನಿ ನಿವಾಸದಲ್ಲಿದ್ದಾಗ, ರಾತ್ರಿ 10 ಗಂಟೆ ಸುಮಾರಿಗೆ ಹೃದಯಾಘಾತ ಸಂಭವಿಸಿದ್ದು, ತಕ್ಷಣ ಅವರನ್ನು ಹತ್ತಿರದ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿ, ಬಿಜೆಪಿ ಸರಕಾರದಲ್ಲಿ ಆಹಾರ ಮತ್ತು ಅರಣ್ಯ ಸಚಿವರಾಗಿದ್ದ ಉಮೇಶ್ ಕತ್ತಿ ಅವರಿಗೆ ಎಂ.ಎಸ್.ರಾಮಯ್ಯ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗಿದ್ದರು, ಚಿಕಿತ್ಸೆ ಫಲಕಾರಿಯಾಗದೆ ನಿಧನ ಹೊಂದಿದ್ದಾರೆಂದು ಆಸ್ಪತ್ರೆ ಮೂಲಗಳು ದೃಢಪಡಿಸಿವೆ.
೮ ಬಾರಿ ಶಾಸಕರಾಗಿ, ೨ ಬಾರಿ ಸಚಿವರಾಗಿ ಸೇವೆ ಸಲ್ಲಿಸಿದ್ದ ಉಮೇಶ್ ಕತ್ತಿ ಅವರಿಗೆ ಈ ಹಿಂದೆ ಎರಡು ಮೂರು ಸಲ ಹೃದಯಾಘಾತವಾಗಿದ್ದು, ಆರೋಗ್ಯವಾಗಿದ್ದರು. ಆದರೆ ಇಂದು ರಾತ್ರಿ ೧೦ ರ ಸುಮಾರಿಗೆ ಬಾತ್ ರೂಂನಲ್ಲಿ ಕುಸಿದುಬಿದ್ದ ಸಚಿವರಿಗೆ ತಕ್ಷಣವೇ ಚಿಕಿತ್ಸೆ ಕೊಡಿಸಿದರೂ ಫಲಕಾರಿಯಾಗದೆ ನಿಧನ ಹೊಂದಿದ್ದಾರೆ.




