ಪ್ರವೀಣ್ ನೆಟ್ಟಾರು ಹತ್ಯೆ ಬಳಿಕ ಮುಚ್ಚಿದ್ದ ಕೋಳಿ ಅಂಗಡಿ ಮತ್ತೆ ಓಪನ್

ಸುಳ್ಯ: ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಬಳಿಕ ಮುಚ್ಚಿದ್ದ ಪ್ರವೀಣ್ ಮಾಲೀಕತ್ವದ ಕೋಳಿ ಅಂಗಡಿ ಮತ್ತೆ ಪುನಾರಂಭಗೊಂಡಿದೆ. ಪ್ರವೀಣ್ ನೆಟ್ಟಾರು ಕುಟುಂಬಸ್ಥರು ಅಂಗಡಿ ಮುನ್ನಡೆಸಲು ಉತ್ಸಾಹ ತೋರದ ಕಾರಣ ಬೆಳ್ಳಾರೆ ಭಾಗದ ಮತ್ತೊಬ್ಬ ಬಿಜೆಪಿ ಮತ್ತು ಹಿಂದೂ ಕಾರ್ಯಕರ್ತರೊಬ್ಬರು ಈ ಅಂಗಡಿಯ ಜವಾಬ್ದಾರಿ ವಹಿಸಿಕೊಂಡಿದ್ದಾರೆ.
ಜು.26ರಂದು ಹಂತಕರಿಂದ ಹತ್ಯೆಗೊಳಗಾದ ಪ್ರವೀಣ್ ನೆಟ್ಟಾರು ಮಾಲೀಕತ್ವದ ಅಕ್ಷಯ ಚಿಕನ್ ಸೆಂಟರ್ ಮತ್ತೆ ಪುನರಾರಂಭಗೊಂಡಿದೆ. ಬೆಳ್ಳಾರೆಯ ಮಾಸ್ತಿಕಟ್ಟೆಯಲ್ಲಿರುವ ಈ ಅಂಗಡಿ ಬಿಜೆಪಿ ಹಾಗೂ ಹಿಂದೂ ಸಂಘಟನೆಗಳ ಸಕ್ರೀಯ ಸದಸ್ಯ ಯತೀಶ್ ಮುರ್ಕೆತ್ತಿ ಮಾಲಕತ್ವದಲ್ಲಿ ಪುನರಾರಂಭಗೊಳ್ಳುತ್ತಿದೆ. ಯತೀಶ್ ಈ ಹಿಂದೆ ಎಬಿವಿಪಿಯಲ್ಲಿ ಜಿಲ್ಲಾ ಸಂಚಾಲಕರಾಗಿ ಬಳಿಕ ಸುಳ್ಯ ತಾಲೂಕು ಜವಾಬ್ದಾರಿಯಲ್ಲಿ ತೊಡಗಿಸಿಕೊಂಡಿದ್ದರು.
ಯತೀಶ್ ಕೋಳಿ ಸಾಕಾಣಿಕೆಯನ್ನು ಮಾಡುತ್ತಿದ್ದು ಇದೀಗ ಚಿಕನ್ ಸೆಂಟರ್ ಪ್ರಾರಂಭಿಸುತ್ತಿದ್ದಾರೆ. ಮತಾಂಧ ಶಕ್ತಿಗಳಿಗೆ ಹೆದರದೆ ವ್ಯವಹಾರವನ್ನು ಮುಂದುವರೆಸುತ್ತಿದ್ದೇನೆ. ಮತಾಂಧ ಶಕ್ತಿಗಳ ನೀಚ ಕೆಲಸಕ್ಕೆ ಹಿಂದೂ ಸಮಾಜ ಎಂದಿಗೂ ಎದೆಗುಂದುವುದಿಲ್ಲ ಎಂಬ ಸಂದೇಶವನ್ನು ಈ ಮೂಲಕ ನೀಡುತ್ತಿದ್ದೇನೆ. ಈ ಅಂಗಡಿಯು ಅಕ್ಷಯ ಚಿಕನ್ ಸೆಂಟರ್ ಹೆಸರಿನಲ್ಲೇ ಮುಂದುವರೆಯಲಿದ್ದು, ಗ್ರಾಹಕರು ಸಹಕರಿಸಬೇಕು ಎಂದು ಯತೀಶ್ ಹೇಳಿದ್ದಾರೆ.