ವಿಟ್ಲ: ಸರಕಾರಿ ಪ್ರಥಮ ದರ್ಜೆ ಕಾಲೇಜ್ ಗೆ ನ್ಯಾಕ್ ತಂಡ ಭೇಟಿ: 2.28 ಶ್ರೇಯಾಂಕಗಳೊಂದಿಗೆ ‘ಬಿ’ ಗ್ರೇಡ್ ಪಡೆದ ಕಾಲೇಜ್

ವಿಟ್ಲ: ವಿಟ್ಲದ ಸರಕಾರಿ ಪ್ರಥಮ ದರ್ಜೆ ಕಾಲೇಜು ಇತ್ತೀಚೆಗೆ ಮೂರನೇ ಆವರ್ತದ ನ್ಯಾಕ್ ಮೌಲ್ಯಮಾಪನ ಹಾಗೂ ಮಾನ್ಯತಾ ಪ್ರಕ್ರಿಯೆಗೆ ಒಳಪಟ್ಟು 2.28 ಶ್ರೇಯಾಂಕಗಳೊಂದಿಗೆ ‘ಬಿ’ ಗ್ರೇಡ್ ಗಳಿಸಿಕೊಂಡು ಹಿಂದಿಗಿಂತಲೂ ಉತ್ತಮ ಶ್ರೇಯಾಂಕವನ್ನು ದಾಖಲಿಸಲು ಯಶಸ್ವಿಯಾಗಿದೆ.
ಎರಡು ದಿನಗಳ ಈ ಪ್ರಕ್ರಿಯೆಯಲ್ಲಿ ನ್ಯಾಕ್ ಪೀರ್ ತಂಡದ ಮುಖ್ಯಸ್ಥರಾಗಿ ರಾಜಸ್ಥಾನದ ಸಂಗಮ್ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಡಾ. ಕರುಣೇಶ್ ಸಕ್ಸೇನ, ಸದಸ್ಯ ಸಂಯೋಜಕಾರಾಗಿ ಪಂಜಾಬಿನ ಪಟಿಯಾಲದ ಪಂಜಾಬಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಡಾ. ಗುರುಮಿಟ್ ಸಿಂಗ್ ಸಿದ್ದು ಸದಸ್ಯರಾಗಿ ಗೋವಾದ ಸೇಂಕ್ಟೆಲಿಮ್‌ನ ಸರಕಾರಿ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಕಾಲೇಜಿನ ಡಾ. ಜೆರ್ವಾಸಿಯೋ ಎಸ್.ಎಫ್.ಎಲ್. ಮೆಂಡಿಸ್ ರವರುಗಳು ಭಾಗವಹಿಸಿದರು.
ನ್ಯಾಕ್ ಪೀರ್ ತಂಡವು ಕಾಲೇಜಿನ ವಿವಿಧ ಶೈಕ್ಷಣಿಕ ಚಟುವಟಿಕೆಗಳು, ಬೋಧನಾ ಮತು ಕಲಿಕಾ ವಿಧಾನಗಳು, ಸಂಶೋಧನೆ ಮತ್ತು ಸಮುದಾಯ ವಿಸ್ತರಣಾ ಚಟುವಟಿಕೆಗಳು, ಕಾಲೇಜಿನ ಭೌತಿಕ ಸೌಲಭ್ಯಗಳು, ಪಠ್ಯೇತರ ಚಟುವಟಿಕೆಗಳು, ಆಡಳಿತ ಕ್ರಮಗಳು ಮತ್ತು ಅಂತರ್ಜಾಲ ಆಧಾರಿತ ಬೋಧನಾ, ಕಲಿಕಾ, ಆಡಳಿತ ವ್ಯವಸ್ಥೆ, ಕಾಲೇಜಿನ ವಿಶಿಷ್ಟತೆ ಹಾಗೂ ಉತ್ತಮ ಅಭ್ಯಾಸ ಕ್ರಮಗಳ ಕುರಿತು ಸುದೀರ್ಘವಾಗಿ ಪರಿಶೀಲಿಸಿತು.
ತಜ್ಞರ ತಂಡವು ಪ್ರಾಂಶುಪಾಲರು, ಆಂತರಿಕಾ ಗುಣಮಟ್ಟ ಭರವಸಾ ಕೋಶ, ಕಾಲೇಜು ಅಭಿವೃದ್ಧಿ ಸಮಿತಿ, ಬೋಧಕ ಹಾಗೂ ಬೋಧಕೇತರ ವೃಂದ, ಪ್ರಸಕ್ತ ವಿದ್ಯಾರ್ಥಿಗಳು, ಹಿರಿಯ ವಿದ್ಯಾರ್ಥಿ ಸಂಘ. ರಕ್ಷಕ-ಶಿಕ್ಷಕ ಸಂಘ ಹಾಗೂ ಎನ್.ಎಸ್.ಎಸ್.. ಯುವ ರೆಡ್ ಕ್ರಾಸ್, ರೋವರ್ಸ್ ಹಾಗೂ ರೇಂಜರ್ಸ್ ಘಟಕಗಳೂ ಸೇರಿದಂತೆ ಕಾಲೇಜಿನಲ್ಲಿರುವ ವಿವಿಧ ಸಂಘಗಳು ಮತ್ತು ಕೋಶಗಳ ಪದಾಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿ ಅವುಗಳ ಕಾರ್ಯಚಟುವಟಿಕೆಗಳ ಸಂಪೂರ್ಣ ವಿವರಗಳನ್ನು ಸಂಗ್ರಹಿಸಿತು.
ಉತ್ತಮ ಶ್ರೇಯಾಂಕವನ್ನು ದಾಖಲಿಸುವ ನಿಟ್ಟಿನಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಶ್ರೀಜಾ ಜೆ. ಹಾಗೂ ಆಂತರಿಕಾ ಗುಣಮಟ್ಟ ಭರವಸಾ ಕೋಶದ ಸಂಯೋಜಕರಾದ ಪ್ರೊ. ಪರಮೇಶ್ವರಿ ಎನ್. ಬೋಧಕ ಹಾಗೂ ಬೋಧಕೇತರ ವೃಂದ, ಪ್ರಸಕ್ತ ವಿದ್ಯಾರ್ಥಿಗಳು ಮಾತ್ರವಲ್ಲದೆ ಕಾಲೇಜಿನ ಅಭಿವೃದ್ಧಿ ಸಮಿತಿ, ಹಿರಿಯ ವಿದ್ಯಾರ್ಥಿ ಸಂಘ, ರಕ್ಷಕ-ಶಿಕ್ಷಕ ಸಂಘಗಳ ಪದಾಧಿಕಾರಿಗಳು ಈ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಕೈಜೋಡಿಸಿ ಶ್ರಮವಹಿಸಿದ್ದರು.
ಈ ಸಂದರ್ಭದಲ್ಲಿ ನ್ಯಾಕ್ ಪೀರ್ ತಂಡವು ಕಾಲೇಜಿನ ಶೈಕ್ಷಣಿಕ ವಾತಾವರಣ, ಗ್ರಾಮೀಣ ಬಡ ವಿದ್ಯಾರ್ಥಿಗಳಲ್ಲಿರುವ ಕ್ರೀಯಾಶೀಲತೆ, ಕ್ರೀಡಾಸಕ್ತಿ, ಕಲಿಕಾ ಚಟುವಟಿಕೆಗಳನ್ನು ತರಗತಿಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದು ವಿದ್ಯಾರ್ಥಿಗಳು ನಢೆಸಿಕೊಟ್ಟ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಿಸಿ ಪ್ರಶಂಸಿರುತ್ತದೆ.