ಕೊಕ್ಕಡ: ಮಹಿಳೆಯ ಸಂಶಯಾಸ್ಪದ ಸಾವು ಪ್ರಕರಣ, ಪತಿ ಪೊಲೀಸ್ ವಶಕ್ಕೆ
ಬೆಳ್ತಂಗಡಿ: ಮಹಿಳೆಯೊಬ್ಬರು ಸಂಶಯಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ ಘಟನೆ ಕೊಕ್ಕಡ ಸಮೀಪ ನಡೆದಿದೆ.
ಕೊಕ್ಕಡದ ಅಗರ್ತ ಎಂಬಲ್ಲಿಯ ಗಣೇಶ್ ಗೌಡ ಎಂಬವರ ಪತ್ನಿ ಮೋಹಿನಿ ಎಂಬವರು ಆಗಸ್ಟ್ 30 ರಂದು ಸಂಶಯಾಸ್ಪದ ರೀತಿಯಲ್ಲಿ ಬಿದ್ದು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಮಹಿಳೆಗೆ ಕಳೆದ ಎರಡು ವರ್ಷಗಳಿಂದ ಅನಾರೋಗ್ಯವಿತ್ತು. ಅಲ್ಲದೇ ದಂಪತಿ ಕುಡಿತದ ಚಟ ಹೊಂದಿದ್ದರು ಎನ್ನಲಾಗಿದೆ. ರಾತ್ರಿ ಮನೆಯಲ್ಲಿ ಒಮ್ಮೊಮ್ಮೆ ಸಣ್ಣಪುಟ್ಟ ಜಗಳಗಳು ನಡೆಯುತಿತ್ತು ಎಂದು ಸ್ಥಳೀಯರು ಮಾಹಿತಿ ನೀಡಿದರಲ್ಲದೇ ಮಹಿಳೆ ಕಳೆದ ಕೆಲವು ದಿನಗಳ ಹಿಂದೆ ಬಿದ್ದು ಗಾಯ ಮಾಡಿಕೊಂಡಿದ್ದರು ಎಂಬ ಮಾಹಿತಿಯನ್ನೂ ನೀಡಿದ್ದಾರೆ.
ಒಂದು ವೇಳೆ ಕುಡಿತದಿಂದಾಗಿ ಬಿದ್ದು ತಲೆಗೆ ಗಾಯವಾಗಿದೆಯೇ ಅಥವಾ ಬೇರೆ ಏನಾದರೂ ನಡೆದಿದೆಯೇ ಎಂದು ತನಿಖೆಯಿಂದ ತಿಳಿದುಬರಬೇಕಾಗಿದೆ.
ಮೇಲ್ನೊಟ್ಟಕ್ಕೆ ತಲೆಗೆ ಗಾಯವಾಗಿದ್ದು ಬಿದ್ದು ಗಾಯವಾಗಿರುವ ಶಂಕೆ ವ್ಯಕ್ತವಾಗಿದೆ.




