February 3, 2026

ಪೊಲೀಸರ ಮೇಲೆ ಹಲ್ಲೆ ನಡೆಸಿ ತಪ್ಪಿಸಲು ಯತ್ನ: ಇಬ್ಬರ ಮೇಲೆ ಫೈರಿಂಗ್

0
n4163115601661339244018f416234c870181745c9de4254b479b63af91a9ee556ed134992c644c876ac4dd.jpg

ಕಲಬುರಗಿ: ನಗರದಲ್ಲಿ ಕಳೆದ ತಡ ರಾತ್ರಿ ಮಹಾರಾಷ್ಟ ಮೂಲದ ಇಬ್ಬರು ದರೋಡೆಕೋರರ ಪೊಲೀಸರ ಮೇಲೆ ಹಲ್ಲೆ ನಡೆಸಿ ತಪ್ಪಿಸಲು ಯತ್ನ ನಡೆಯುವ ವೇಳೆ ಆರೋಪಿಗಳನ್ನು ಗುಂಡು ಹಾರಿಸಿ ಬಂಧಿಸಿದ್ದಾರೆ. ಈ ವೇಳೆಯಲ್ಲಿ ನಡೆದ ಗಲಾಟೆಯಲ್ಲಿ ಓರ್ವ ಪೇದೆಗೂ ಗಾಯವಾದ ಘಟನೆ ನಡೆದಿದೆ.

ಹಗಲು ಹೊತ್ತಿನಲ್ಲಿ ಭವಿಷ್ಯ ಹೇಳುತ್ತ ರಾತ್ರಿ ಹೊತ್ತು ಮನೆ ಕಳ್ಳತನ, ದರೋಡೆ ನಡೆಸುತ್ತಿದ್ದ ತುಳಜಾಪುರ ತಾಲೂಕಿಲ ಜಾಳಕೋಟ ಗ್ರಾಮದ ಲಹು ಬಾಹುರಾವ ಸಾವಂತ್ (30) ಮತ್ತು ದೇವಿದಾಸ ದತ್ತುಸಾಬ ಸಾವಂತ್ (20) ಆರೋಪಿಗಳು‌ ಗುಂಡೇಟು ತಿಂದವರು.

ಕಳೆದ ರಾತ್ರಿ ನಾಲ್ವರು ದರೋಡೆಕೋರರು ನಗರದ ಬಿದ್ದಾಪುರ ಕಾಲೊನಿಯಲ್ಲಿ ಮನೆ ಕಳ್ಳತನಕ್ಕೆ ಯತ್ನಿಸಿದ್ದಾರೆ. ಕಾಲೊನಿಯ ಜನ ಪೊಲೀಸ್ ಕಂಟ್ರೋಲ್ ರೂಂಗೆ ಫೋನ್ ಮಾಡಿದ್ದಾರೆ. ತಕ್ಷಣವೇ ಅಶೋಕನಗರ ಪೊಲೀಸರು ಸ್ಥಳಕ್ಕೆ ಧಾವಿಸಿ ಸಾರ್ವಜನಿಕರ ಸಹಕಾರದಿಂದ ನಾಲ್ವರು ದರೋಡೆಕೋರರನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ನಂತರ ಅವರು ವಾಸವಿದ್ದ ಸ್ಥಳಕ್ಕೆ ಅವರನ್ನು ಕರೆದುಕೊಂಡು ಹೋಗುವ ಸಂದರ್ಭದಲ್ಲಿ ಇಬ್ಬರು ದರೋಡೆಕೋರರು ತಮ್ಮ ಬಳಿ ಇದ್ದ ಚಾಕುವಿನಿಂದ ಅಶೋಕನಗರ ಪೊಲೀಸ್ ಠಾಣೆ ಕಾನ್ಸ್ ಟೇಬಲ್ ಶಿವಶರಣಪ್ಪ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಈ ವೇಳೆ ಸ್ಥಳದಲ್ಲಿದ್ದ ಅಶೋಕನಗರ ಠಾಣೆ ಸರ್ಕಲ್ ಇನ್ಸಪೆಕ್ಟರ್ ಪಂಡಿತ ಸಾಗರ ತಮ್ಮ ಹಾಗೂ ಸಿಬ್ಬಂದಿಗಳ ಆತ್ಮ ರಕ್ಷಣೆಗಾಗಿ ಮೊದಲು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಆಗಲೂ ದರೋಡೆಕೋರರು ತಮ್ಮ ಕೈಯಲ್ಲಿದ್ದ ಚಾಕು ಬಿಸಾಡದೇ ಇದ್ದುದ್ದರಿಂದ ಗುಂಡು ಹಾರಿಸಿದ್ದಾರೆ. ಇಬ್ಬರು ದರೋಡೆಕೋರರ ಕಾಲಿಗೆ ಗುಂಡೇಟು ತಗುಲಿದೆ. ಗುಂಡೇಟಿನಿಂದ ಗಾಯಗೊಂಡಿರುವ ದರೋಡೆಕೋರರಾದ ಲಹು ಹಾಗೂ ದೇವಿದಾಸ ಅವರನ್ನು ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಕೈದಿಗಳ ವಾರ್ಡನಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

ಘಟನೆಯ ವೇಳೆ ಕಾನ್ಸಟೇಬಲ್ ಶಿವಶರಣಪ್ಪರಿಗೂ ಗಾಯವಾಗಿದೆ. ದರೋಡೆಕೋರರು ಚಾಕುವಿನಿಂದ ನಡೆಸಿದ ದಾಳಿಯಿಂದ ಗಾಯಗೊಂಡಿದ್ದಾರೆ. ಅವರನ್ನು ನಗರದ ಬಸವೇಶ್ವರ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲು ಮಾಡಲಾಗಿದೆ.

Leave a Reply

Your email address will not be published. Required fields are marked *

error: Content is protected !!