ಖ್ಯಾತ ಲೇಖಕ ಸಲ್ಮಾನ್ ರಶ್ದಿ ಮೇಲೆ ಚಾಕುವಿನಿಂದ ಇರಿತ
ಅಮೆರಿಕ: ಪಶ್ಚಿಮ ನ್ಯೂಯಾರ್ಕ್‌ನಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಖ್ಯಾತ ಲೇಖಕ ಸಲ್ಮಾನ್ ರಶ್ದಿ ಅವರ ಮೇಲೆ ಅಪರಿಚಿತ ವ್ಯಕ್ತಿಯೊಬ್ಬ ಹಲ್ಲೆ ಮಾಡಿದ್ದಾನೆ.
ಷಟೌಕ್ವಾ ಇನ್‌ಸ್ಟಿಟ್ಯೂಟ್‌ನ ವೇದಿಕೆಯ ಮೇಲೆ ಆಯೋಜಕರು ರಶ್ದಿ ಅವರನ್ನು ಭಾಷಣಕ್ಕೆ ಆಹ್ವಾನಿಸುತ್ತಿದ್ದಂತೆಯೇ ಅಪರಿಚಿತ ವ್ಯಕ್ತಿ ರಶ್ದಿ ಅವರಿಗೆ ಚಾಕುವಿನಿಂದ ಇರಿದನು. ತಕ್ಷಣವೇ ರಶ್ದಿ ನೆಲಕ್ಕೆ ಕುಸಿದುಬಿದ್ದರು. ಹಲ್ಲೆಕೋರನನ್ನು ಬಂಧಿಸಲಾಗಿದೆ.
ರಶ್ದಿ ಅವರ ಸ್ಥಿತಿಯ ಬಗ್ಗೆ ತಕ್ಷಣಕ್ಕೆ ಯಾವುದೇ ವಿವರಗಳು ತಿಳಿದುಬಂದಿಲ್ಲ.
ಸಲ್ಮಾನ್ ರಶ್ದಿ ಅವರು ಬರೆದಿರುವ ‘ದ ಸಟಾನಿಕ್ ವರ್ಸೆಸ್’ ಕೃತಿಯು 1988ರಲ್ಲಿ ಇರಾನ್‌ನಲ್ಲಿ ನಿಷೇಧಕ್ಕೊಳಗಾಗಿದೆ. ಹಲವು ಮುಸ್ಲಿಮರು ಈ ಕೃತಿಯಲ್ಲಿ ಧರ್ಮನಿಂದನೆಯ ಅಂಶಗಳಿವೆ ಎಂದು ಆರೋಪಿಸಿದ್ದರು. ರಶ್ದಿ ಅವರ ಹತ್ಯೆಗೆ ಆಗ ಫತ್ವಾ ಹೊರಡಿಸಲಾಗಿತ್ತು.




