ಭಟ್ಕಳ: ಮನೆಯ ಮೇಲೆ ಗುಡ್ಡ ಕುಸಿತ, ಮಣ್ಣು, ಅವಶೇಷಗಳಡಿ ಸಿಲುಕಿಕೊಂಡ ನಾಲ್ವರು

ಭಟ್ಕಳ: ತಾಲ್ಲೂಕಿನ ಮುಟ್ಟಳ್ಳಿಯಲ್ಲಿ ಮಂಗಳವಾರ ಬೆಳಿಗ್ಗೆ ಮನೆಯ ಮೇಲೆ ಗುಡ್ಡ ಕುಸಿದಿದೆ. ಮನೆ ಸಂಪೂರ್ಣ ಕುಸಿದಿದ್ದು, ಮಣ್ಣು, ಅವಶೇಷಗಳಡಿ ನಾಲ್ವರು ಸಿಲುಕಿದ್ದಾರೆ.
ಮುಟ್ಟಳ್ಳಿ ಗೌರಮ್ಮಜ್ಜಿ ಮನೆ ಇದಾಗಿದೆ. ಮನೆಯಲ್ಲಿದ್ದ ಲಕ್ಷ್ಮಿ ನಾರಾಯಣ ನಾಯ್ಕ (48), ಅವರ ಪುತ್ರಿ ಲಕ್ಷ್ಮಿ ನಾಯ್ಕ (33), ಪುತ್ರ ಅನಂತ ನಾರಾಯಣ ನಾಯ್ಕ (32) ಹಾಗೂ ಸಂಬಂಧಿ ಪ್ರವೀಣ ಬಾಲಕೃಷ್ಣ ನಾಯ್ಕ (20) ಮಣ್ಣಿನಲ್ಲಿ ಸಿಲುಕಿಕೊಂಡಿದ್ದಾರೆ.
ಗುಡ್ಡದ ಮೇಲಿನಿಂದ ಭಾರಿ ಪ್ರಮಾಣದಲ್ಲಿ ಚಿರೆಕಲ್ಲು ಮಿಶ್ರಿತ ಮಣ್ಣು ಕುಸಿದಿದೆ. ಮನೆ ಸಂಪೂರ್ಣ ನಾಶವಾಗಿದೆ. ಸ್ಥಳದಲ್ಲಿ ರಕ್ಷಣಾ ಕಾರ್ಯ ಆರಂಭವಾಗಿದೆ.
ಭಟ್ಕಳದ ನಾಗ ಮಾಸ್ತಿ ದೇವಸ್ಥಾನದ ಮೂರ್ತಿಗಳು ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿವೆ. ರೈಲು ನಿಲ್ದಾಣ ಸಮೀಪದಲ್ಲಿರುವ ಈ ದೇವಸ್ಥಾನವು ಇತಿಹಾಸ ಪ್ರಸಿದ್ಧವಾಗಿದೆ. ದೇವಸ್ಥಾನದ ನಾಲ್ಕೈದು ಮೂರ್ತಿಗಳು ನೀರು ಪಾಲಾಗಿವೆ.
ತಾಲ್ಲೂಕಿನ ವೆಂಕಟಾಪುರದಲ್ಲಿ ಪ್ರವಾಹದಿಂದ ಹುಲ್ಲುಕಿ ಸೇತುವೆಯ ಬಳಿ ರೈಲು ಹಳಿಗೂ ಹಾನಿಯಾಗಿದೆ. ಕೊಂಕಣ ರೈಲ್ವೆಯ ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಿದ್ದು, ಭಟ್ಕಳ ನಿಲ್ದಾಣದಲ್ಲಿ ನಿಲುಗಡೆ ಮಾಡಲಾಗಿದೆ.