ಸುರತ್ಕಲ್ ನಾಳೆ ಹುಟ್ಟು ಹಬ್ಬದ ಆಚರಣೆಗೆಂದು ಚಪ್ಪಲಿ ಮತ್ತು ಸ್ಮಾರ್ಟ್ ವಾಚ್ ಖರೀದಿಗೆ ಬಂದಿದ್ದ ಫಾಝಿಲ್
ಮಂಗಳೂರು : ಸುರತ್ಕಲ್ ನ ಹೃದಯ ಭಾಗದಲ್ಲಿ ಗುರುವಾರ ರಾತ್ರಿ ದುಷ್ಕರ್ಮಿಗಳಿಂದ ಮಾರಕಾಯುಧಗಳಿಂದ ದಾಳಿಗೊಳಗಾದ ಯುವಕ ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದು, ಕೋಮು ಉದ್ವಿಗ್ನತೆ ಇನ್ನಷ್ಟು ತೀವ್ರವಾಗಿದ್ದು, ವ್ಯಾಪಕ ಕಟ್ಟೆಚ್ಚರ ವಹಿಸಲಾಗುತ್ತಿದೆ.
ಮಂಗಳ ಪೇಟೆಯ ಫಾಝಿಲ್ (23) ಎಂಬ ಯುವಕನ ಮೇಲೆ ತಲವಾರು ದಾಳಿ ನಡೆಸಲಾಗಿತ್ತು. ನಾಳೆ ಹುಟ್ಟು ಹಬ್ಬದ ಆಚರಣೆಗೆಂದು ಚಪ್ಪಲಿ ಮತ್ತು ಸ್ಮಾರ್ಟ್ ವಾಚ್ ಖರೀದಿಗೆ ಬಂದಿದ್ದ ಫಾಝಿಲ್ ಮೇಲೆ ರಾತ್ರಿ ಅಂಗಡಿಯ ಎದುರಿನ ಜಗಲಿಯಲ್ಲೇ ಮಾರಕಾಯುಧಗಳಿಂದ ದಾಳಿ ನಡೆಸಿ ದುಷ್ಕರ್ಮಿಗಳು ಪರಾರಿಯಾಗಿದ್ದರು. ತಪ್ಪಿಸಿಕೊಳ್ಳಲು ಯತ್ನಿಸಿದರೂ ಸಾಧ್ಯವಾಗಲಿಲ್ಲ.
ಭಾರೀ ಪ್ರಮಾಣದಲ್ಲಿ ರಕ್ತ ಸ್ರಾವ ವಾಗಿದ್ದು, ಗಂಭೀರ ಸ್ಥಿತಿಯಲ್ಲಿರುವ ಫಾಝಿಲ್ ರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿದ ಮಾಜಿ ಶಾಸಕ, ಕಾಂಗ್ರೆಸ್ ನಾಯಕ ಮೊಯಿದ್ದೀನ್ ಬಾವಾ, ಇದು ಬೆಳ್ಳಾರೆಯಲ್ಲಿ ನಡೆದ ಪ್ರವೀಣ್ ನೆತ್ತರು ಕೊಲೆಗೆ ಪ್ರತೀಕಾರದ ಹತ್ಯೆ, ನಾಲ್ವರು ದುಷ್ಕರ್ಮಿಗಳು ಬಿಳಿ ಕಾರಿನಲ್ಲಿ ಬಂದು ಹತ್ಯೆ ಮಾಡಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.
ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಲಾಗುತ್ತಿದ್ದು, ಪೊಲೀಸರು ಭಾರಿ ಕಟ್ಟೆಚ್ಚರ ವಹಿಸಿದ್ದಾರೆ. ಸಿಎಂ ಮಂಗಳೂರಿಗೆ ಭೇಟಿ ನೀಡಿ ಪ್ರವೀಣ್ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಬೆಂಗಳೂರಿಗೆ ವಾಪಾಸಾಗುವ ಮುನ್ನವೇ ಕರಾವಳಿಯಲ್ಲಿ ನೆತ್ತರು ಹರಿದಿರುವುದು ಕಾನೂನು ಸುವ್ಯವಸ್ಥೆಯ ಕುರಿತು ಪ್ರಶ್ನೆ ಮೂಡಿಸುವಂತೆ ಮಾಡಿದೆ.





