March 26, 2026

ಬಹುಮುಖ ವ್ಯಕ್ತಿತ್ವದ ಹೋರಾಟಗಾರ ಜಿ.ರಾಜಶೇಖರ್ ಅವರ ನಿಧನಕ್ಕೆ ಪಾಪ್ಯುಲರ್ ಫ್ರಂಟ್ ಸಂತಾಪ

0
nationalherald_2019-12_f9e4ead3-6af2-487d-914d-45558a9db8d7_pfi.jpeg

ಮಂಗಳೂರು: ಪ್ರಖರ ಚಿಂತಕ, ಮಾನವ ಹಕ್ಕುಗಳ ಹೋರಾಟಗಾರ, ಕನ್ನಡ ಸಾಹಿತ್ಯ ಲೋಕದ ವಿಮರ್ಶಕ ಸಹಿತ ಬಹುಮುಖ ವ್ಯಕ್ತಿತ್ವದ ಹೋರಾಟಗಾರಾಗಿದ್ದ ಜಿ.ರಾಜಶೇಖರ್ ಅವರ ನಿಧನಕ್ಕೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಜ್ಯಾಧ್ಯಕ್ಷ ನಾಸಿರ್ ಪಾಶ ಹಾಗೂ ಪ್ರಧಾನ ಕಾರ್ಯದರ್ಶಿ ಅಯ್ಯೂಬ್ ಅಗ್ನಾಡಿ ಜಂಟಿ ಹೇಳಿಕೆಯಲ್ಲಿ ತೀವ್ರ ಸಂತಾಪ ಸೂಚಿಸಿದ್ದಾರೆ.

ದೇಶದಲ್ಲಿ ನಡೆಯುತ್ತಿದ್ದ ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ ಕ್ಷೇತ್ರಗಳ ಬೆಳವಣಿಗೆಗಳ ಬಗ್ಗೆ ಅವರು ಓರ್ವ ಸೂಕ್ಷ್ಮಗ್ರಹಿಯಾಗಿದ್ದರು. ತಮ್ಮ ತೀಕ್ಷ್ಣವಾದ ಬರಹ-ಭಾಷಣಗಳ ಮೂಲಕ ಅದನ್ನು ಪ್ರಸ್ತುತಪಡಿಸುತ್ತಿದ್ದ ರೀತಿ ಅದ್ಭುತವಾದುದು. ಜಿ.ರಾಜಶೇಖರ್ ನಾಡಿನ ಪ್ರಖ್ಯಾತ ಲೇಖಕರಿಂದ ಸ್ವೀಕೃತಿ ಪಡೆದ ವ್ಯಕ್ತಿಯಾಗಿದ್ದರು. ಅವರು ರಾಜ್ಯದಲ್ಲಿ ಕೋಮು ಸಾಮರಸ್ಯ, ಶಾಂತಿ, ಸಹಬಾಳ್ವೆಗಾಗಿ ನಿರಂತರ ಶ್ರಮಿಸಿದರು. ಮನುಷ್ಯ ವಿರೋಧಿಯಾಗಿದ್ದ ಹಿಂದುತ್ವ ಫ್ಯಾಶಿಸ್ಟ್ ಸಿದ್ಧಾಂತಗಳನ್ನು ಅವರು ಕಟುವಾಗಿ ಟೀಕಿಸುತ್ತಿದ್ದರು. ಸಂಘಪರಿವಾರದ ಶಕ್ತಿಗಳು ಹಿಂದು-ಮುಸ್ಲಿಮರ ಸೌಹಾರ್ದದ ಪ್ರತೀಕವಾಗಿದ್ದ ಬಾಬಾ ಬುಡನ್ ಗಿರಿಯನ್ನು ತಮ್ಮ ದ್ವೇಷ ಹರಡುವ ಅಸ್ತ್ರವನ್ನಾಗಿ ಮಾಡಿದಾಗ ಅದರ ವಿರುದ್ಧ ಮುಂಚೂಣಿಯಲ್ಲಿ ನಿಂತು ಹೋರಾಟ ನಡೆಸಿದರು.

ದಲಿತರು, ಮುಸ್ಲಿಮರು ಸಹಿತ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿದ್ದ ದಾಳಿಗಳ ವಿರುದ್ಧ ಅವರು ಕಳವಳ ಹೊಂದಿದ್ದರು ಮತ್ತು ಅದರ ವಿರುದ್ಧ ಬೀದಿಗಿಳಿದು ಗಟ್ಟಿ ಧ್ವನಿಯಲ್ಲಿ ಮಾತನಾಡುತ್ತಿದ್ದರು. ಮಾನವ ಹಕ್ಕುಗಳ ಉಲ್ಲಂಘನೆಗಳ ಪ್ರಕರಣಗಳು ನಡೆದಾಗ ಆ ಪ್ರದೇಶಗಳಿಗೆ ಸ್ವತಃ ಭೇಟಿ ನೀಡಿ ಅದರ ಬಗ್ಗೆ ಸತ್ಯ ಶೋಧನಾ ವರದಿಯನ್ನು ಸಿದ್ಧಪಡಿಸುತ್ತಿದ್ದರು. ಕರಾವಳಿ ಜಿಲ್ಲೆಗಳಲ್ಲಿ ಸಂಘಪರಿವಾರದ ಆಕ್ರಮಣದ ವಿರುದ್ಧ ಸಿದ್ಧಪಡಿಸಿದ ವರದಿಗಳನ್ನು ಅವರು ಅನೇಕ ಸಾರ್ವಜನಿಕ ವೇದಿಕೆಗಳಲ್ಲಿ ಮಂಡಿಸಿದ್ದರು. ತಮ್ಮ ಅನಾರೋಗ್ಯದ ಮಧ್ಯೆಯೂ ಅವರು ಬಹಳಷ್ಟು ಹೋರಾಟಗಳಲ್ಲಿ ಭಾಗವಹಿಸಿದರು. ಪಾಪ್ಯುಲರ್ ಫ್ರಂಟ್ ನ ಪ್ರಾರಂಭದ ಕಾಲದಿಂದಲೇ ಸಂಘಟನೆಯ ಎಲ್ಲಾ ರೀತಿಯ ಹೋರಾಟಗಳೊಂದಿಗೆ ಅವರು ಮುಕ್ತ ಮನಸ್ಸಿನಿಂದ ಕೈಜೋಡಿಸಿದ್ದರು.

ಸ್ನೇಹಮಯಿ, ಪ್ರಾಮಾಣಿಕ, ನೇರ-ನಿಷ್ಠುರ, ಸರಳ ಜೀವಿಯಾಗಿದ್ದ ಜಿ.ರಾಜಶೇಖರ್, ಕನ್ನಡ ನಾಡು ಕಂಡ ಅಪರೂಪದ ವ್ಯಕ್ತಿತ್ವವಾಗಿದ್ದಾರೆ. ಇವರ ನಿಧನದಿಂದ ನಾಡಿನ ಜನಪರ ಹೋರಾಟ ವಲಯದಲ್ಲಿ ದೊಡ್ಡಮಟ್ಟದ ನಿರ್ವಾತ ಸೃಷ್ಟಿಯಾಗಿದೆ. ಆರೆಸ್ಸೆಸ್-ಸಂಘಪರಿವಾರದ ದ್ವೇಷದ ಸಿದ್ಧಾಂತದ ವಿರುದ್ಧ ರಾಜಿರಹಿತ ಹೋರಾಟ ನಡೆಸಿದ ಮತ್ತು ಮಾನವೀಯತೆ ಪರವಾಗಿ ಸದಾ ಮಿಡಿದ ಅವರ ಆದರ್ಶ ಬದುಕು ಮುಂದಿನ ತಲೆಮಾರಿಗೆ ಪ್ರೇರಣೆಯಾಗಲಿ. ಕುಟುಂಬ ವರ್ಗಕ್ಕೆ, ಅಭಿಮಾನಿ ವರ್ಗಕ್ಕೆ ಅವರ ಅಗಲುವಿಕೆಯನ್ನು ಸಹಿಸುವ ಶಕ್ತಿಯನ್ನು ಸೃಷ್ಟಿಕರ್ತನು ಕರುಣಿಸಲಿ ಎಂದು ನಾಸಿರ್ ಪಾಶ ಮತ್ತು ಅಯ್ಯೂಬ್ ಅಗ್ನಾಡಿ ಪ್ರಕಟನೆಯಲ್ಲಿ ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!