February 2, 2026

ಮಡಿಕೇರಿ: ಕುಸಿಯುವ ಭೀತಿಯಲ್ಲಿರುವ ರಿಟೈನಿಂಗ್ ವಾಲ್: ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್‌ ಗಳ ಸುರಿಮಳೆ

0
IMG-20220717-WA0017.jpg

ಮಡಿಕೇರಿ: ಈಗಾಗಲೇ ಭಾರಿ ಚರ್ಚೆಗೆ ಗ್ರಾಸವಾಗಿರುವ ಮಡಿಕೇರಿ ಜಿಲ್ಲಾಧಿಕಾರಿ ಕಚೇರಿಗೆ ನಿರ್ಮಿಸಿರುವ ತಡೆಗೋಡೆಗೆ ಸಂಬಂಧಿಸಿದ ವರದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಬೇರೆ ಬೇರೆ ರೀತಿಯ ಟ್ರೋಲ್ ಗಳಿಗೆ ಕಾರಣವಾಗಿದೆ.

ಈ ತಡೆಗೋಡೆಯು ಅವಜ್ಞಾನಿಕ ಕಾಮಗಾರಿಯ ಮೂಲಕ ನಡೆದಿದೆ ಎಂಬ ವರದಿಗಳು ಈಗಾಗಲೇ ಮಾಧ್ಯಮಗಳಲ್ಲಿ ವಿವಿಧ ಸಂಘ ಸಂಸ್ಥೆಗಳ ಪತ್ರಿಕಾ ಹೇಳಿಕೆಗಳ ಮೂಲಕ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಸದ್ಯಕ್ಕೆ ಹೇಗಾದರೂ ಮಾಡಿ ಕುಸಿಯುವ ಭೀತಿಯಲ್ಲಿರುವ ತಡೆಗೋಡೆಯನ್ನು ತಡೆದು ನಿಲ್ಲಿಸಬೇಕೆಂಬ ನಿಟ್ಟಿನಲ್ಲಿ ಸಂಬಂಧಪಟ್ಟ ಲೋಕಪಯೋಗಿ ಇಲಾಖೆಯ ಅಧಿಕಾರಿಗಳು ನಾನಾ ರೀತಿಯ ಪ್ರಯತ್ನವನ್ನು ಪಡುತ್ತಿದ್ದಾರೆ.

ಇದರ ನಡುವೆ ಬಿರುಕು ಬಿಟ್ಟಿರುವ ತಡೆಗೋಡೆಯ ಭಾಗಗಳಲ್ಲಿ ಕಬ್ಬಿಣದ ಸರಳಿಗಳನ್ನು, ಮರದ ದಿಮ್ಮಿಗಳನ್ನು ಅಡ್ಡಲಾಗಿ ಇಟ್ಟಿರುವ ಪೋಸ್ಟರ್ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟು, ಭಾರಿ ಅನಾಹುತ ತಪ್ಪಿಸಲಿರುವ ಮರದ ತುಂಡು, ಜರ್ಮನ್ ಟೆಕ್ನಾಲಜಿ ಎಂದು ಕೆಲವರು ಹೀಯಾಳಿಸಿದರೆ, ಮರಳು ಚೀಲ ರಾಶಿಯ ಚಿತ್ರವನ್ನು ಹಾಕಿ ಗೋಡೆಯನ್ನು ತಡೆಯಲು ತಂತ್ರಜ್ಞಾನ ಯಾವುದೇ ಇರಲಿ ಕೊನೆಗೆ ಬೇಕಾದದ್ದು 2 ಸಾವಿರ ರೂಪಾಯಿಯ ಪೂಯ್ಯೇ ಎಂದು ಕೆಲವರು, ಇನ್ನೊಂದು ಪೋಸ್ಟರ್ ನಲ್ಲಿ ಬರೋಬ್ಬರಿ ಏಳುವರೆ ಕೋಟಿ ವೆಚ್ಚದ ತಡೆಗೋಡೆ ಕುಸಿಯುತ್ತಿದೆ, ಇದರ ನಿರ್ಮಾಣ ಹೊತ್ತ ಅಧಿಕಾರಿಯ ಐಷಾರಾಮಿ ಬಂಗಲೆ ಗಟ್ಟಿಯಾಗಿ ನಿಂತಿದೆ ಎಂದು ಬೇರೆ ಬೇರೆ ಬರಹಗಳು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಬರಹಗಳ ದಾಟಿಯಲ್ಲಿ ಕಾಮಗಾರಿಯ ಬಗ್ಗೆ, ಮತ್ತು ಕುಸಿಯುವ ಭೀತಿಯಲ್ಲಿರುವ ತಡೆಗೋಡೆಯ ಬಗ್ಗೆ ಸಣ್ಣ ಸಣ್ಣ ಲೇಖನಗಳ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಒಟ್ಟಿನಲ್ಲಿ ಕೆಲವರಿಗಂತು ಇಲಿಗೆ ಪ್ರಾಣ ಸಂಕಟ ಎಂದರೆ ಕೆಲವರಿಗೆ ಬೆಕ್ಕಿಗೆ ಚೆಲ್ಲಾಟ ಎಂಬಂತೆ ಮಡಿಕೇರಿಯ ತಡೆಗೋಡೆಯ ಕಥೆಯಾಗಿದೆ.

Leave a Reply

Your email address will not be published. Required fields are marked *

error: Content is protected !!