February 4, 2026

ಅಲ್ ಅಮೀನ್ ಯೂತ್ ಫೆಡರೇಷನ್ ಅರಂಬೂರು ಹೊರತಂದಿರುವ ಬಕ್ರೀದ್ ಹಬ್ಬದ ವಿಶೇಷಾಂಕ “ಇಖ್ರಅ್” ಬಿಡುಗಡೆ

0
IMG-20220709-WA0043.jpg

ಸುಳ್ಯ: ತಾಲ್ಲೂಕಿನ ಅರಂಬೂರಿನಲ್ಲಿ ಕಾರ್ಯಾಚರಿಸುತ್ತಿರುವ, ಯುವ ಸಂಘಟನೆಯಾದ “ಅಲ್ ಅಮೀನ್ ಯೂತ್ ಫೆಡರೇಷನ್ ಅರಂಬೂರು” ಬಕ್ರೀದ್ ಹಬ್ಬದ ಪ್ರಯುಕ್ತ ಹೊರತಂದಿರುವ ಈದ್ ವಿಶೇಷಾಂಕ “ಇಖ್ರಅ್” ಬಿಡುಗಡೆ ಕಾರ್ಯಕ್ರಮವು ಬದರ್ ಜುಮಾ ಮಸೀದಿ ಅರಂಬೂರು ಇದರ ಮದರಸ ಹಾಲ್ ‌ನಲ್ಲಿ ನಡೆಯಿತು.

ಶುಕ್ರವಾರದ ಜುಮಾ ನಮಾಝ್‌ನ ನಂತರ ನಡೆದ ಈ ಕಾರ್ಯಕ್ರಮದಲ್ಲಿ ಮಸೀದಿಯ ಜಮಾ-ಅತ್ ಕಮಿಟಿಯ ಗೌರವಾಧ್ಯಕ್ಷರೂ, ಹಿರಿಯರು ಆದ ಹಾಜಿ ಅಬ್ದುಲ್ ರಹಿಮಾನ್ ಅರಂಬೂರು ಮತ್ತು ಮಸೀದಿಯ ಅಧ್ಯಕ್ಷರಾದ ಭಾಷಾ ಸಾಹೇಬ್ ಅರಂಬೂರು ವಿಶೇಷಾಂಕವನ್ನು ಬಿಡುಗಡೆಗೊಳಿಸಿದರು.

ನಂತರ ಮಸೀದಿಯ ಖತೀಬರೂ, AYFನ ಗೌರವಾಧ್ಯಕ್ಷರಾದ ಮೂಸಾ ಹಾರೀಸ್ ಮಖ್ದೂಮಿ ಮಾತನಾಡಿ, ಬರಹದ ಮಹತ್ವ, ಅದಕ್ಕಾಗಿ ಶ್ರಮಿಸಿದವರ ಪರಿಶ್ರಮದ ಬಗ್ಗೆ ಚುಟುಕಾಗಿ ತಿಳಿಸಿ ಪ್ರಾರ್ಥಿಸಿ, ಇದರ ಹಿಂದೆ ಕೆಲಸ ಮಾಡಿದ ಪ್ರತಿಯೊಬ್ಬರನ್ನು ಪ್ರಶಂಸಿಸಿದರು.

ನಂತರ ಪ್ರಾಸ್ತಾವಿಕವಾಗಿ ಸಂಪನ್ಮೂಲ ವ್ಯಕ್ತಿಯಾದ ಬಶೀರ್ ಅರಂಬೂರು ರವರು ಮಾತನಾಡಿ, “ಈದ್ ವಿಶೇಷಾಂಕ ಪವಿತ್ರ ಪ್ರವಾದಿಯವರಿಗೆ ಅವತೀರ್ಣಗೊಂಡ ಮೊದಲ ದೇವವಾಣಿ ಇಖ್ರಹ್ ನಾಮದೊಂದಿಗೆ ಪ್ರಕಟಿಸುವ ಮೂಲಕ ಜ್ಞಾನಕ್ಕೆ ಮಹತ್ವ ನೀಡುವ ಚಿಂತನೆಗೆ ಒತ್ತು ನೀಡುವ ಪ್ರಯತ್ನ ನಡೆಸಲಾಗಿದೆ. ಓದು, ಬರಹ ಮತ್ತು ಅದನ್ನು ಪ್ರಕಟಿಸುವ ಚಟುವಟಿಕೆಗಳು ನೈಪಥ್ಯಕ್ಕೆ ಸೇರುತ್ತಿರುವ ಈ ಕಾಲದಲ್ಲಿ ವಿಶೇಷಾಂಕ ಹೊರತರುತ್ತಿರುವ ಆಲ್ ಅಮೀನ್ ನ ಕಾರ್ಯ ಶ್ಲಾಘನೀಯ” ಎಂದರು.

ತದನಂತರ AYF ಜೊತೆ ಕಾರ್ಯದರ್ಶಿ ಆಸೀಫ್ ಪನ್ನೆ ಮಾತನಾಡಿ,ಮೊದಲಾಗಿ ಈ ವಿಶೇಷಾಂಕವನ್ನು ಸಿದ್ದಪಡಿಸಿದ ಸಂಪಾದಕರು ಹಾಗೂ ಉತ್ತಮ ರೀತಿಯಲ್ಲಿ ಡಿಸೈನ್ ಮಾಡಿ ಚಂದಗಾಣಿಸಿದ, ಯುವ ಸಂಪಾದಕ ಕಬೀರ್ ಲಿಮ್ರಾ, ಹಲವಾರು ಲೇಖನಗಳನ್ನು ಕನ್ನಡ ಮತ್ತು ಇಂಗ್ಲಿಷ್ ನಲ್ಲಿ ಬರೆದು ಸಹಕಾರ ನೀಡಿದ ಯುವ ಬರಹಗಾರರು ಹಾಗೂ ಬರಹಗಾರ್ತಿಗೆ ಧನ್ಯವಾದಗಳನ್ನು ಅರ್ಪಿಸುತ್ತಾ, ಈ ಕಾರ್ಯದಲ್ಲಿ ಸಹಕರಿಸಿದ ಜಾಹೀರಾತುದಾರರಿಗೂ, ಹಗಲಿರುಳು ಈ ವಿಶೇಷಾಂಕವನ್ನು ಹೊರತರಲು ಶ್ರಮಿಸಿದವರಿಗೂ ಹಾಗೂ ಬಿಡುಗಡೆ ಕಾರ್ಯಕ್ರಮದಲ್ಲಿ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿದರು.

ಈ ಸಂದರ್ಭದಲ್ಲಿ ಮಸೀದಿ ಖತೀಬರಾದ ಮೂಸಾ ಹಾರಿಸ್ ಮಖ್ದೂಮಿ, ಸಹ ಅಧ್ಯಾಪಕರಾದ ಬಶೀರ್ ಮುಸ್ಲಿಯಾರ್, ಮಸೀದಿಯ ಕಾರ್ಯದರ್ಶಿ ಕಲಂದರ್ ಅರಂಬೂರು, ಸದಸ್ಯರಾದ ಬಶೀರ್ ಅರಂಬೂರು, ಝಕರಿಯ ಅರಂಬೂರು, ಅಬ್ಬಾಸ್ ಮಾಂಬ್ಲಿ, ಖಾದರ್ ಮಾಂಬ್ಲಿ, ಫರೀದ್ ಭಾಷಾ ಸಾಹೇಬ್,ಕಮಾಲ್ ಮಾಂಬ್ಲಿ , ಅಲ್ ಅಮೀನ್ ಯೂತ್ ಫೆಡರೇಷನ್‌ನ ಅಧ್ಯಕ್ಷರಾದ ರಶೀದ್ ಮಾಂಬ್ಲೀ, ಪ್ರಧಾನ ಕಾರ್ಯದರ್ಶಿ ಮುನೀರ್ ಶೈನ್, ಜೊತೆ ಕಾರ್ಯದರ್ಶಿ ಆಸೀಫ್ ಪನ್ನೆ ಹಾಗೂ ಸಂಘಟನಾ ಸದಸ್ಯರು, ಮದ್ರಸ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

AYF ಪ್ರಧಾನ ಕಾರ್ಯದರ್ಶಿಯಾದ ಮುನೀರ್ ಶೈನ್ ಸ್ವಾಗತಿಸಿ,ಕಾರ್ಯಕ್ರಮವನ್ನು ನಿರೂಪಿಸಿದರು. ಜೊತೆ ಕಾರ್ಯದರ್ಶಿಯಾದ ಆಸಿಫ್ ಪನ್ನೆ ವಂದಿಸಿದರು. ನಂತರ ಸ್ವಲಾತ್‌ನೊಂದಿಗೆ ಕಾರ್ಯಕ್ರಮ ಸಮಾರೋಪಗೊಂಡಿತು.

Leave a Reply

Your email address will not be published. Required fields are marked *

error: Content is protected !!