February 4, 2026

ಬಕ್ರೀದ್ ಹಬ್ಬಾಚರಣೆ ಕುರಿತು ಸುಳ್ಯ ಪೊಲೀಸ್ ಠಾಣೆಯಲ್ಲಿ ಶಾಂತಿ ಸಭೆ

0
IMG-20220709-WA0008.jpg

ಸುಳ್ಯ: ತಾಲೂಕಿನಾದ್ಯಂತ ಮುಸಲ್ಮಾನ ಬಾಂಧವರ ಬಕ್ರೀದ್ ಹಬ್ಬಾಚರಣೆ ಜುಲೈ 9ರಂದು ನಡೆಯಲಿದ್ದು ಇದರ ಅಂಗವಾಗಿ ಸುಳ್ಯ ಪೊಲೀಸ್ ಠಾಣೆಯಲ್ಲಿ ಶಾಂತಿ ಸಭೆಯನ್ನು ಇಂದು ಏರ್ಪಡಿಸಲಾಗಿತ್ತು.

ಸಭೆಯಲ್ಲಿ ಸುಳ್ಯ ತಾಲೂಕಿನ ವಿವಿಧ ಸಮುದಾಯದ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸುಳ್ಯ ಪೊಲೀಸ್ ಠಾಣಾ ಉಪನಿರೀಕ್ಷಕ ದಿಲೀಪ್ ನಾಳೆ ಜುಲೈ 9ರಂದು ಮುಸಲ್ಮಾನ ಬಾಂಧವರ ಬಕ್ರೀದ್ ಹಬ್ಬಾಚರಣೆ ನಡೆಯಲಿದ್ದು ಈ ವೇಳೆ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಸಮುದಾಯದ ಮುಖಂಡರುಗಳು ಜಾಗೃತಿ ವಹಿಸಿಕೊಳ್ಳಬೇಕು ಎಂದು ಹೇಳಿದರು.

ಕಾನೂನು ಬಾಹಿರವಾದ ಜಾನುವಾರುಗಳ ಸಾಗಾಟ, ಮಾಂಸ ಮಾರಾಟ ಮುಂತಾದ ಘಟನೆಗಳು ತಿಳಿದುಬಂದಲ್ಲಿ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಹೇಳಿದರು. ಯಾವುದೇ ರೀತಿಯಲ್ಲಿ ಸಾರ್ವಜನಿಕರು ಕಾನೂನು ಕೈಗೆತ್ತಿಕೊಳ್ಳುವ ಕೆಲಸಕ್ಕೆ ಮುಂದಾಗಬಾರದೆಂದು ಮಾಹಿತಿ ನೀಡಿದರು. ಶಾಂತಿ ಕಾಪಾಡಲು ಎಲ್ಲಾ ಸಮುದಾಯದ ಸಾರ್ವಜನಿಕರು ಪೊಲೀಸರೊಂದಿಗೆ ಕೈ ಜೋಡಿಸಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸುಳ್ಯ ಗಾಂಧಿನಗರ ಕೇಂದ್ರ ಜುಮ್ಮಾ ಮಸ್ಜಿದ್ ಅಧ್ಯಕ್ಷ ಹಾಜಿ ಕೆ ಎಂ ಮುಸ್ತಫ ಸುಳ್ಯದಲ್ಲಿ ನಾವೆಲ್ಲರೂ ಒಗ್ಗಟ್ಟಾಗಿ ಜೀವಿಸುತ್ತಿದ್ದೇವೆ. ಇಲ್ಲಿ ಯಾವುದೇ ಅಹಿತಕರ ಘಟನೆಗಳಿಗೆ ನಾವುಗಳು ಆಸ್ಪದವನ್ನು ಕೊಡಲಿಲ್ಲ. ಹಬ್ಬ ಆಚರಣೆಯ ಅಂಗವಾಗಿ ಬೆಳಿಗ್ಗೆ 8 ಗಂಟೆಗೆ ಸ್ಥಳೀಯ ಮಸೀದಿಗಳಲ್ಲಿ ನಮಾಜ್ ಆರಂಭವಾಗಿ ಕೇವಲ ಒಂದು ಗಂಟೆಯಲ್ಲಿ ಮುಗಿಸಿಕೊಂಡು ಅವರವರ ಮನೆಗೆ ತೆರಳಿ ಹಬ್ಬಾಚರಣೆಯನ್ನು ಮಾಡಿಕೊಳ್ಳುತ್ತೇವೆ. ಸುಳ್ಯ ಭಾಗದಲ್ಲಿ ಜಾನುವಾರುಗಳ ಬಲಿದಾನ ನಡೆಯುವಂತದ್ದು ತುಂಬಾ ವಿರಳ. ಆದ್ದರಿಂದ ಸುಳ್ಯದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.

ಈ ವೇಳೆ ವಿಶ್ವ ಹಿಂದೂ ಪರಿಷತ್ ಮುಖಂಡ ಲತೀಶ್ ಗುಂಡ್ಯ ಮಾತನಾಡಿ ದನದ ಮಾಂಸವನ್ನು ಮಾರಾಟ ಮಾಡುವ ಮಾಹಿತಿ ಸಿಕ್ಕಿದ ಕೂಡಲೇ ಅವರೇ ಅದನ್ನು ತಡೆಯಬೇಕು ಮತ್ತು ಪೊಲೀಸರಿಗೆ ಮಾಹಿತಿಯನ್ನು ನೀಡಬೇಕು ಎಂದು ಹೇಳಿದರು.

ಸಭೆಯಲ್ಲಿ ವಿವಿಧ ವಿಷಯಗಳ ಕುರಿತು ಚರ್ಚೆ ನಡೆದು ಶಾಂತಿಯುತವಾದ ಹಬ್ಬಾಚರಣೆ ಮಾಡುವಂತೆ ಮತ್ತು ಮಸೀದಿಗಳಲ್ಲಿ ಕೋವಿಡ್ ನಿಯಮಗಳನ್ನು ಪಾಲಿಸುವಂತೆ, ಮಳೆ ಹೆಚ್ಚಿರುವ ಕಾರಣ ಸಣ್ಣಪುಟ್ಟ ಮಕ್ಕಳನ್ನು ಮಸೀದಿ ಬಳಿ ಕರೆದು ಹೋಗಿ ಯಾವುದೇ ಅನಾಹುತಕ್ಕೆ ಕಾರಣ ವಾಗುವಂತೆ ಆಸ್ಪದವನ್ನು ಕೊಡಬಾರದೆಂದು ಸುಳ್ಯ ಎಸ್ ಐ ಮಾಹಿತಿ ನೀಡಿದರು.

ಸಭೆಯಲ್ಲಿ ನಗರ ಪಂಚಾಯತಿ ಸದಸ್ಯ ಕೆ ಎಸ್ ಉಮ್ಮರ್, ಹಾಜಿ ಇಬ್ರಾಹಿಂ ಕತ್ತರ್ ಮಂಡೆಕೋಲು, ಇಕ್ಬಾಲ್ ಎಲಿಮಲೆ, ಅಬ್ದುಲ್ ಖಾದರ್ ಅಜ್ಜಾವರ, ಸೋಮನಾಥ ಪೂಜಾರಿ, ತೀರ್ಥರಾಮ ಜಾಲಸೂರು, ರಾಜು ಪಂಡಿತ್, ಶಶಿಧರ ಎಂ ಜೆ, ಸನತ್ ಸುಳ್ಯ,ಶರೀಫ್ ರಿಲಾಕ್ಸ್, ದುರ್ಗಾ ಪ್ರಸಾದ್ ಬಿಕೆ, ಗುರು ದತ್ ಸೇಟ್, ಅಬ್ಬಾಸ್ ಪೈಚಾರ್ ಮೊದಲಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You may have missed

error: Content is protected !!