ಉಪ್ಪಿನಂಗಡಿ: ಕೆವೈಸಿ ಅಪ್‌ಡೇಟ್ ಮಾಡಲು ಹೋಗಿ 7.47 ಲಕ್ಷ ರೂ. ಕಳೆದುಕೊಂಡ ಶಿಕ್ಷಕಿ
ಉಪ್ಪಿನಂಗಡಿ: ಕೆವೈಸಿ ಅಪ್‌ಡೇಟ್ ಮಾಡಲು ಬ್ಯಾಂಕಿನ ಕಸ್ಟಮರ್ ಕೇರ್‌ಗೆ ಕರೆ ಮಾಡಲು ತಿಳಿಸಿ ಇಂಟರ್‌ನೆಟ್ ಬ್ಯಾಂಕಿಂಗ್ ಸಿಸ್ಟಮ್ ಮೂಲಕ ವಂಚನಾ ಜಾಲಕ್ಕೆ ಸಿಲುಕಿದ ಶಿಕ್ಷಕಿ 7.47 ಲಕ್ಷ ರೂ ಕಳೆದುಕೊಂಡ ಬಗ್ಗೆ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ.
ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ನೆಲ್ಯಾಡಿ ಗ್ರಾಮದ ಕೊಪ್ಪ ಮಾದೇರಿ ನಿವಾಸಿಯಾಗಿರುವ ಪ್ರಸಕ್ತ ಸರ್ಕಾರಿ ಪ್ರೌಢಶಾಲಾ ಶಿಕ್ಷಕಿಯಾಗಿರುವ ಮಹಿಳೆ ಸಂತ್ರಸ್ತೆ ಜೂ.11 ರಂದು ಈಕೆಯ ಮಗನ ಮೊಬೈಲ್‌ಗೆ ಎಟಿಎಂ ಕಾರ್ಡ್ ಬ್ಲಾಕ್ ಆಗಿರುವ ಬಗ್ಗೆ ಮೆಸೇಜ್ ಬಂದಿತ್ತು.
ಜೂ.23 ರಂದು 7029216854 ಸಂಖ್ಯೆಯ ನಂಬರ್‌ನಿಂದ ಕರೆ ಬಂದಿದ್ದು ಮೆಸೇಜ್‌ನಲ್ಲಿ ಬ್ಯಾಂಕಿನ ಕಸ್ಟಮರ್ ಕೇರ್ ಸಂಖ್ಯೆ 8240871104 ಕ್ಕೆ ಕರೆ ಮಾಡಿ ಕೆವೈಸಿ ಅಪ್‌ಡೆಟ್ ಮಾಡುವಂತೆ ಸೂಚಿಸಲಾಗಿತ್ತು.
ದೂರುದಾರರ ಮಗ ಕರೆ ಮಾಡಿದಾಗ ನಿಮ್ಮ ಖಾತೆಯ ಪಿನ್ ಜನರೇಟ್ ಮಾಡಲು ನಿಮ್ಮ ಮನೆಯಲ್ಲಿರುವ ಇನ್ನೊಬ್ಬರ ಎಸ್‌ಬಿಐ ಖಾತೆ ನಂಬರ್ ಹಾಗೂ ಮೊಬೈಲ್ ನಂಬರ್‌ನ್ನು ತಿಳಿಸಲು ಸೂಚಿಸಿದ್ದು ಅದರಂತೆ ಮಾಹಿತಿ ನೀಡಲಾಗಿತ್ತು.
ಅದೇ ದಿನ ಕಸ್ಟಮರ್ ಕೇರ್ ಸಂಖ್ಯೆ ಎಂದು ತಿಳಿಸಲಾದ ಸಂಖ್ಯೆಯಿಂದಲೇ ದೂರುದಾರರ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ಸಂಖ್ಯೆಗೆ ಕಳುಹಿಸಲಾದ ಓಟಿಪಿ ಸಂಖ್ಯೆ ನಿಡುವಂತೆ ತಿಳಿಸಲಾಗಿತ್ತು. ಬ್ಯಾಂಕಿನವರದ್ದೇ ಕರೆ ಎಂದು ನಂಬಿದ ಶಿಕ್ಷಕಿಯ ಮಗ ಒಟಿಪಿ ನೀಡಿದ್ದಾರೆ.
ಬಳಿಕ ಹತ್ತಿರದ ಎಟಿಎಂ ಕೇಂದ್ರಕ್ಕೆ ಹೋಗಲು ತಿಳಿಸಿ ಅಲ್ಲಿ ಏಟಿಎಂ ಕಾರ್ಡ್ ಹಾಕಿ ಇಂಟರ್‌ನೆಟ್ ಬ್ಯಾಂಕಿಂಗ್ ಅ್ಯಪ್‌ನಲ್ಲಿ ಅವರು ಹೇಳಿದ ರೀತಿಯಲ್ಲಿ ಮಾಡಿದ್ದಾರೆ.
ಎಲ್ಲಾ ಪ್ರಕ್ರಿಯೆ ಮುಗಿದ ಬಳಿಕ ಬ್ಯಾಂಕಿನಿಂದ ಖಾತೆಯ ಮೊಬೈಲ್ ನಂಬರ್ ಬದಲಾಯಿಸುವ ಬಗ್ಗೆ ವಿಚಾರಿಸಿದಾಗ ಶಿಕ್ಷಕಿಗೆ ತಾವು ಮೋಸ ಹೋಗಿರುವ ಬಗ್ಗೆ ಅರಿವಾಯಿತು.
ಕೂಡಲೇ ಬ್ಯಾಂಕಿಗೆ ಹೋಗಿ ಖಾತೆಯನ್ನು ಪರಿಶೀಲಿಸಿದಾಗ ದೂರುದಾರರ ಬ್ಯಾಂಕ್ ಖಾತೆಗೆ ಜೂ. 23 ರಂದು 8 ಲಕ್ಷ ರೂ ಜಮೆಯಾಗಿದ್ದು ಹಲವು ಬಾರಿ ಟ್ರಾನ್ಸಕ್ಷನ್ ನಡೆಸಿ ಒಟ್ಟು 7.47 ಲಕ್ಷ ರೂ ಮೊತ್ತವನ್ನು ತೆಗೆಯಲಾಗಿದ್ದು ಕಂಡುಬಂದಿತ್ತು.
ಕಂಗಾಲಾದ ಶಿಕ್ಷಕಿ ಪೊಲೀಸ್ ಇಲಾಖಾ ಸೈಬರ್ ಕ್ರೈಂ ವಿಭಾಗಕ್ಕೆ ದೂರು ಸಲ್ಲಿಸಿ ವಂಚನಾ ಜಾಲವನ್ನು ಪತ್ತೆ ಹಚ್ಚಲು ವಿನಂತಿಸಿದ್ದಾರೆ.





