March 25, 2026

ತೊಕ್ಕೊಟ್ಟು : ನಕಲಿ ಆರೋಗ್ಯ ಪ್ರಮಾಣ ಪತ್ರ ಪ್ರಕರಣದ ಆರೋಪಿ ರೈಲಿನಿಂದ ಹಾರಿ ಆತ್ಮಹತ್ಯೆ

0
IMG-20220620-WA0069

ಮಂಗಳೂರು : ರೈಲ್ವೇ ಸಿಬ್ಬಂದಿಗೆ ನಕಲಿ ಆರೋಗ್ಯ ಸರ್ಟಿಫಿಕೇಟ್‌ ನೀಡಿದ ಪ್ರಕರಣದ ಆರೋಪಿ ವಿಜಯನ್‌ ವಿ.ಎ ಎಂಬವರ ಮೃತದೇಹ ತೊಕ್ಕೊಟ್ಟು ಗಣೇಶನಗರದ ರೈಲ್ವೇ ಹಳಿಯಲ್ಲಿ ಇಂದು ಮಧ್ಯಾಹ್ನ ವೇಳೆ ಪತ್ತೆಯಾಗಿದೆ. ಮೃತ ವ್ಯಕ್ತಿ ನಕಲಿ ಆರೋಗ್ಯ ಸರ್ಟಿಫಿಕೇಟ್‌ ಪ್ರಕರಣಕ್ಕೆ ಸಂಬಂಧಿಸಿ ೧೦ ದಿನಗಳ ಹಿಂದಷ್ಟೇ ಸಿಬಿಐನಿಂದ ಬಂಧಿತನಾಗಿದ್ದ. ಮೃತ ಆರೋಪಿಯ ಜೊತೆ ಇನ್ನಿಬ್ಬರು ಅಧಿಕಾರಿಗಳನ್ನು ಸಿಬಿಐ ಬಂಧಿಸಿತ್ತು. ಚಲಿಸುತ್ತಿರುವ ರೈಲಿನಿಂದ ಹಾರಿ ಆತ್ಮಹತ್ಯೆ ನಡೆಸಿರುವ ಶಂಕೆ ವ್ಯಕ್ತವಾಗಿದೆ. ರೈಲ್ವೇ ಪೊಲೀಸರು ಹಾಗೂ ಉಳ್ಳಾಲ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ರೈಲ್ವೇ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ದಕ್ಷಿಣ ರೈಲ್ವೇ, ದಕ್ಷಿಣ ನೈಋತ್ಯ ರೈಲ್ವೇ ಹಾಗೂ ಕೊಂಕಣ ರೈಲ್ವೇ ಸಿಬ್ಬಂದಿಗೆ  ನಕಲಿ ಆರೋಗ್ಯ  ಪ್ರಮಾಣ ಪತ್ರ ನೀಡುವ ಜಾಲವೊಂದು  ಒಂದು ವರ್ಷದಿಂದ ಸಕ್ರಿಯವಾಗಿತ್ತು. ಈ ಕುರಿತು ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿರುವ  ರೈಲ್ವೇ ಇಲಾಖೆಯ ಸೆಂಟ್ರಲ್‌ ಸ್ಟೇಷನ್‌  ಆರೋಗ್ಯ ತಪಾಸಣೆ ಕೇಂದ್ರಕ್ಕೆ ದಾಳಿ ನಡೆಸಿತ್ತು. ಈ ವೇಳೆ ಹೆಚ್ಚುವರಿ ಮುಖ್ಯ ವೈದ್ಯಕೀಯ ಅಧೀಕ್ಷಕ ಸೇರಿದಂತೆ  ಇಂದು ಆತ್ಮಹತ್ಯೆ ನಡೆಸಿದ ಫಾರ್ಮಸಿಸ್ಟ್‌ ವಿಜಯನ್‌ ಸೇರಿದಂತೆ ಇನ್ನೋರ್ವ ಅಧಿಕಾರಿಗಳನ್ನು ನಕಲಿ ಸರ್ಟಿಫಿಕೇಟ್‌ ಜಾಲ ಪ್ರಕರಣಕ್ಕೆ ಸಂಬಂಧಿಸಿ ಬಂಧಿಸಿದ್ದರು. ಜಾಲ ಒಟ್ಟು ೧೫೦೦ ನಕಲಿ ಆರೋಗ್ಯ ಪ್ರಮಾಣ ಪತ್ರಗಳನ್ನು ಒಂದು ವರ್ಷದಲ್ಲಿ ಒದಗಿಸಿತ್ತು. ಹೆಚ್ಚುವರಿ ಮುಖ್ಯ ವೈದ್ಯಕೀಯ ಅಧೀಕ್ಷಕ ಡಾ. ಶಿವಶಂಕರ ಮೂರ್ತಿ, ಫಾರ್ಮಸಿಸ್ಟ್‌ ವಿಜಯನ್‌ ವಿ.ಎ ಹಾಗೂ ಬ್ರೋಕರ್‌ ಇಬ್ರಾಹಿಂ ಎಂಬವರನ್ನು ಬಂಧಿಸಲಾಗಿತ್ತು. ರೈಲ್ವೇ ಇಲಾಖೆಯ ಕಾನೂನಿನಂತೆ ರೈಲ್ವೇ ಲೈಸೆನ್ಸ್‌ ಹೊಂದಿರುವ ಮಾರಾಟಗಾರರು, ಹೌಸ್‌ ಕೀಪಿಂಗ್‌ ಸ್ಟಾಫ್‌, ಕ್ಯಾಟರಿಂಗ್‌ ಕಾರ್ಮಿಕರು ವಾರ್ಷಿಕವಾಗಿ ಫಿಟ್ನೆಸ್‌ ವೈದ್ಯಕೀಯ ಪ್ರಮಾಣ ಪತ್ರವನ್ನು ಒದಗಿಸಬೇಕಿದೆ. ಇದನ್ನು ಬ್ರೋಕರ್‌ ಮೂಲಕ ದಂಧೆ ನಡೆಸುತ್ತಿದ್ದ ಅಧಿಕಾರಿಗಳು ಪ್ರಮಾಣ ಪತ್ರ ಬೇಕಾದವರಿಂದ ಆಧಾರ್‌ ಕಾರ್ಡ್‌ ಹಾಗೂ ಸಂಬಂಧಿತ ದಾಖಲೆಗಳನ್ನು ವಾಟ್ಸ್ಯಾಪ್‌ ಮೂಲಕ  ಪಡೆದುಕೊಂಡು ರೂ.೫೨೫ ಅನ್ನು ಗೂಗಲ್‌ ಪೇ ಮೂಲಕ ಪಡೆದುಕೊಂಡು  ಸರ್ಟಿಫಿಕೇಟ್‌ ನೀಡುತ್ತಿದ್ದರು. ರಾಜ್ಯದಲ್ಲಿ ಬೆಂಗಳೂರು ಸೇರಿದಂತೆ ಮಂಗಳೂರಿನಲ್ಲಿ ಮಾತ್ರ ರೈಲ್ವೇಯ ಆರೋಗ್ಯ ಇಲಾಖೆಯಿತ್ತು. ಆದರೂ ತಿರುಚನಾಪಳ್ಳಿ, ಬೆಂಗಳೂರು ಸೇರಿದಂತೆ ಹುಬ್ಬಳ್ಳಿಯವರೆಲ್ಲರೂ ಮಂಗಳೂರಿನಿಂದ ಆರೋಗ್ಯ ಪ್ರಮಾಣ ಪತ್ರವನ್ನು ಪಡೆದುಕೊಳ್ಳುತ್ತಿರುವುದರ ವಿರುದ್ಧ ಸಂಶಯ ವ್ಯಕ್ತವಾಗಿತ್ತು.  ಈ ಧಿಕ್ಕಿನಲ್ಲಿ ದಾಖಲಾದ ಪ್ರಕರಣದ ತನಿಖೆಯನ್ನು ನಡೆಸಿದ ಸಿಬಿಐ ಮಂಗಳೂರಿನಲ್ಲಿ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿತ್ತು.

Leave a Reply

Your email address will not be published. Required fields are marked *

error: Content is protected !!