ಕಾಫಿ ಡೇ ಬಳಿ ಮಾದಕ ವಸ್ತು ಮಾರಾಟ:
ವಿದೇಶಿ ಮಹಿಳೆಯ ಬಂಧನ
ಬೆಂಗಳೂರು: ಕಾಫಿ ಡೇ ಬಳಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ವಿದೇಶಿ ಮಹಿಳೆಯನ್ನು ಬಾಣಸವಾಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮಹದೇವಪುರ ನಿವಾಸಿ ಫಾತೀಮಾ ಒಮ್ರಿ(30) ಬಂಧಿತೆ. ಆಕೆಯಿಂದ 1.5 ಲಕ್ಷ ರೂ. ಮೌಲ್ಯದ 13 ಗ್ರಾಂ ಎಂಡಿಎಂಎ ಮಾತ್ರೆಗಳು, ಒಂದು ಐಫೋನ್ ಜಪ್ತಿ ಮಾಡಲಾಗಿದೆ.
ಬುಧವಾರ ಸಂಜೆ ನಾಲ್ಕು ಗಂಟೆ ಸುಮಾರಿಗೆ ಕಮ್ಮನಹಳ್ಳಿ ರಸ್ತೆಯ ಕಾಫಿ ಡೇ ಬಳಿ ವಿದೇಶಿ ಮಹಿಳೆಯೊಬ್ಬಳು ಡ್ರಗ್ಸ್ ಮಾರಾಟ ಮಾಡುತ್ತಿದ್ದಾರೆ ಎಂಬ ಮಾಹಿತಿ ಮೇರೆಗೆ ದಾಳಿ ನಡೆಸಿದ ಪಿಎಸ್‌ಐ ಸಂಗೀತ ಚೌಹಾಣ್ ಮತ್ತು ತಂಡ ಬಂಧಿಸಿ ಠಾಣೆಗೆ ಕರೆತಂದು ವಿಚಾರಣೆ ನಡೆಸಿದಾಗ ಆಕೆ ಬಳಿ ಮಾದಕವಸ್ತುಗಳು ಪತ್ತೆಯಾಗಿವೆ.
ಆಕೆ ವಿರುದ್ಧ ಎನ್‌ಡಿಪಿಎಸ್ ಮತ್ತು ವಿದೇಶಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದರು.




