ಮಂಗಳೂರು: ಕ್ಷುಲ್ಲಕ ವಿಚಾರಕ್ಕೆ ತಂದೆ-ಮಗ ಸೇರಿ ವ್ಯಕ್ತಿಯ ಚೂರಿಯಿಂದ ಇರಿದು ಕೊಲೆ:
ತಂದೆ-ಮಗನ ಬಂಧನ
ಮಂಗಳೂರು: ಕ್ಷುಲ್ಲಕ ವಿಚಾರದಲ್ಲಿ ಜಗಳ ನಡೆದು ತಂದೆ, ಮಗ ಸೇರಿ ವ್ಯಕ್ತಿಯೊಬ್ಬರನ್ನು ಚೂರಿಯಿಂದ ಇರಿದು ಕೊಲೆಗೈದ ಘಟನೆ ನಗರದ ಕಾರ್ ಸ್ಟ್ರೀಟ್ ನಲ್ಲಿ ನಡೆದಿದೆ.
ರಥಬೀದಿಯ ಮಹಮ್ಮಾಯಿ ದೇವಸ್ಥಾನದ ಬಳಿಯ ವೀರ ವೆಂಕಟೇಶ ಅಪಾರ್ಟ್ಮೆಂಟ್ ನಲ್ಲಿ ಘಟನೆ ನಡೆದಿದೆ. ಅಪಾರ್ಟ್ಮೆಂಟ್ ನಿವಾಸಿ, ವಿಕ್ರಮ್ ಟ್ರಾವೆಲ್ಸ್ ಕಂಪನಿಯ ಟೂರ್ ಮ್ಯಾನೇಜರ್ ಆಗಿದ್ದ ವಿನಾಯಕ ಕಾಮತ್ (46) ಕೊಲೆಯಾದವರು.
ಅದೇ ಅಪಾರ್ಟ್ಮೆಂಟ್ ನಿವಾಸಿಗಳಾದ ಕೃಷ್ಣಾನಂದ ಕಿಣಿ (68) ಮತ್ತು ಅವರ ಮಗ ಅವಿನಾಶ್ (32) ಸೇರಿಕೊಂಡು ನಿನ್ನೆ ರಾತ್ರಿ ಚೂರಿಯಿಂದ ತಿವಿದು ಕೊಲೆ ಮಾಡಿದ್ದಾರೆ. 4-5 ದಿನಗಳ ಹಿಂದೆ, ಅಪಾರ್ಟ್ಮೆಂಟ್ ಮುಂದುಗಡೆ ಮಹಾನಗರ ಪಾಲಿಕೆ ವತಿಯಿಂದ ಕಾಂಕ್ರೀಟ್ ಹಾಕಲಾಗಿತ್ತು. ಅದರ ಮೇಲಿಂದ ಕಾರು ಒಯ್ಯುವ ವಿಚಾರದಲ್ಲಿ ಜಗಳ ನಡೆದಿದ್ದು ಇವರೊಳಗೆ ಮಾತಿಗೆ ಮಾತಾಗಿ ಜಗಳ ಆಗಿತ್ತು. ಈ ಹಿಂದೆಯೂ ಕೃಷ್ಣಾನಂದ ಕಿಣಿ ಹಳೆ ದ್ವೇಷ ಇಟ್ಟುಕೊಂಡಿದ್ದು ವಿನಾಯಕ ಕಾಮತ್ ವಿರುದ್ಧ ಜಗಳವಾಡುತ್ತಿದ್ದರು.
ನಿನ್ನೆ ರಾತ್ರಿ ಅಪಾರ್ಟ್ಮೆಂಟ್ ನಿವಾಸಿಗಳು ಕೆಳಗಡೆ ದೀಪಾವಳಿ ಪ್ರಯುಕ್ತ ಪಟಾಕಿ ಸಿಡಿಸುತ್ತಿದ್ದು ವಿನಾಯಕ ಕಾಮತ್ ಕೂಡ ಅಲ್ಲಿಗೆ ತೆರಳಿದ್ದರು. ಈ ವೇಳೆ, ಇಬ್ಬರ ಮಧ್ಯೆ ಮತ್ತೆ ಜಗಳ ತೆಗೆದಿದ್ದು ಮಾತಿಗೆ ಮಾತಾಗಿತ್ತು. ಇತರೇ ನಿವಾಸಿಗಳು ನೋಡುತ್ತಿದ್ದಂತೆಯೇ ವಿನಾಯಕ ಕಾಮತ್ ಮೇಲೆ, ಕೃಷ್ಣಾನಂದ ಕಿಣಿ ಮತ್ತು ಅವರ ಮಗ ಅವಿನಾಶ್ ಕಾಮತ್ ಚೂರಿಯಿಂದ ದಾಳಿ ನಡೆಸಿದ್ದಾರೆ. ಇದನ್ನು ವಿನಾಯಕ ಕಾಮತ್ ಮತ್ತು ಅವರ ಅತ್ತೆ ಬಂದು ನೋಡಿದ್ದು ಕುಸಿದು ಬಿದ್ದ ವಿನಾಯಕ ಅವರನ್ನು ಕೂಡಲೇ ಇತರ ನಿವಾಸಿಗಳ ಸಹಾಯ ಪಡೆದು ಆಸ್ಪತ್ರೆಗೆ ದಾಖಲು ಮಾಡಿದ್ದರು. ರಾತ್ರಿ ಸುಮಾರು 1.40 ಕ್ಕೆ ವಿನಾಯಕ ಕಾಮತ್ ಚಿಕಿತ್ಸೆ ಫಲಕಾರಿಯಾಗದೆ ಸಾವು ಕಂಡಿದ್ದಾರೆ.
ಈ ಬಗ್ಗೆ ವಿನಾಯಕ ಕಾಮತ್ ಬಂದರು ಠಾಣೆಯಲ್ಲಿ ದೂರು ನೀಡಿದ್ದು ಕೊಲೆ ಪ್ರಕರಣ ದಾಖಲಾಗಿದೆ. ಆರೋಪಿಗಳಾದ ತಂದೆ – ಮಗನನ್ನು ಪೊಲೀಸರು ಬಂಧಿಸಿದ್ದಾರೆ.






