ಬೆಳ್ತಂಗಡಿ: ಮರಕ್ಕೆ ಬೈಕ್ ಡಿಕ್ಕಿ: ಸವಾರ ಸ್ಥಳದಲ್ಲೇ ಮೃತ್ಯು
ಬೆಳ್ತಂಗಡಿ: ಧರ್ಮಸ್ಥಳದಿಂದ ನೇತ್ರಾವತಿ ಸ್ನಾನಘಟ್ಟ ಬರುವ ಹಾದಿಯಲ್ಲಿ ರಸ್ತೆಗೆ ಬಿದ್ದಿದ್ದ ಮರಕ್ಕೆ ಢಿಕ್ಕಿ ಹೊಡೆದ ಬೈಕ್ ಸವಾರರೊಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಇಂದು ಮುಂಜಾನೆ ನಡೆದಿದೆ.
ಘಟನೆಯಲ್ಲಿ ಓಡಿಲ್ನಾಲ ಮುಗುಳಿಚತ್ರ ನಿವಾಸಿ ವಸಂತ್ ಕುಮಾರ್ ಜೈನ್ (42) ಮೃತರು ಎಂದು ಗುರುತಿಸಲಾಗಿದೆ.
ಮೃತರು ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟ ಸಮೀಪ ಹೋಟೆಲ್ ನಡೆಸುತ್ತಿದ್ದು ಧರ್ಮಸ್ಥಳದಲ್ಲಿ ವಾಸವಾಗಿದ್ದರು. ಮುಂಜಾನೆ ಧರ್ಮಸ್ಥಳ ಕಡೆಯಿಂದ ಸ್ನಾನಘಟ್ಟ ಬರುವ ಮಾರ್ಗ ಮಧ್ಯೆ ರಸ್ತೆಗೆ ಬಿದ್ದ ಮರವನ್ನು ಗಮನಿಸದೆ ಬೈಕ್ ಢಿಕ್ಕಿಯಾಗಿದೆ.
ರಸ್ತೆಗೆ ಎಸೆಯಲ್ಪಟ್ಟ ಅವರು, ತಲೆಗೆ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆ ಉಪನಿರೀಕ್ಷಕ ಓಡಿಯಪ್ಪ ಗೌಡ ಮತ್ತು ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.





