ಮಾರಕಾಸ್ತ್ರಗಳಿಂದ ಇರಿದು ಯುವಕನ ಕೊಲೆ
ಕಲಬುರಗಿ: ಇಲ್ಲಿಗೆ ಸಮೀಪದ ಮುಡಬೂಳ ಗ್ರಾಮದಲ್ಲಿ ಕ್ಷುಲ್ಲಕ ವಿಷಯಕ್ಕೆ ಶುರುವಾದ ಜಗಳ ವಿಕೋಪಕ್ಕೆ ತಿರುಗಿ ಕೊಲೆಯಲ್ಲಿ ಅಂತ್ಯವಾದ ಘಟನೆ ಭಾನುವಾರ ಮಧ್ಯರಾತ್ರಿ ಜರುಗಿದೆ.
ಜಗಳದಲ್ಲಿ ವಿಶ್ವನಾಥ ಅಣ್ಣಾರಾವ್ ಸಂಗಾವಿ (30) ಎಂಬುವವರು ಕೊಲೆಯಾಗಿದ್ದಾರೆ. ಮಾರಕಾಸ್ತ್ರಗಳಿಂದ ಹೊಟ್ಟೆ, ತಲೆ ಮತ್ತು ಕತ್ತಿಗೆಗೆ ಹೊಡೆದಿದ್ದರಿಂದ ವಿಶ್ವನಾಥ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಸುದ್ದಿ ತಿಳಿಯುತ್ತಿದ್ದಂತೆ ಚಿತ್ತಾಪುರ ಪೊಲೀಸ್ ಠಾಣೆಯ ಸಿಪಿಐ ಪ್ರಕಾಶ ಯಾತನೂರ, ಪಿಎಸ್ಐ ಎ.ಎಸ್ ಪಟೇಲ್ ಅವರು ಸಿಬ್ಬಂದಿಯೊಂದಿಗೆ ರಾತ್ರಿ ಮುಡಬೂಳ ಗ್ರಾಮಕ್ಕೆ ದೌಡಾಯಿಸಿ ಮಾಹಿತಿ ಕಲೆ ಹಾಕಿದ್ದಾರೆ.
ಕೊಲೆಯಾದ ವಿಶ್ವನಾಥ ಶವವನ್ನು ಪರೀಕ್ಷೆಗೆಂದು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಕೊಲೆ ಘಟನೆಯಿಂದ ಗ್ರಾಮದಲ್ಲಿ ಬಿಗುವಿನ ವಾತಾವರಣ ಉಂಟಾಗಿದ್ದು, ಹೆಚ್ಚಿನ ಸಿಬ್ಬಂದಿ ನಿಯೋಜಿಸಿ ಪೊಲೀಸ್ ಬಿಗಿ ಬಂದೊಬಸ್ತ್ ಕಲ್ಪಿಸಲಾಗಿದೆ.




