ಎಚ್.ಡಿ.ಕುಮಾರಸ್ವಾಮಿ ಊಸರವಳ್ಳಿ ಇದ್ದಂತೆ: ಜೆಡಿಎಸ್ ಶಾಸಕ ಶ್ರೀನಿವಾಸ್
ತುಮಕೂರು: ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿರುವ ಜೆಡಿಎಸ್ ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ಅವರು ತಮ್ಮ ಪಕ್ಷದ ಮುಖಂಡ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಅವನು ಉತ್ತಮನಾ, ಅವನು ಯಾವುದರಲ್ಲಿ ಉತ್ತಮನೆಂದು ಹೇಳಲಿ. ಬೆಳಿಗ್ಗೆ ಒಂದು ಹೇಳುತ್ತಾನೆ, ಸಂಜೆ ಮತ್ತೊಂದು ಹೇಳುತ್ತಾನೆ. ಊಸರವಳ್ಳಿ ಇದ್ದಂತೆ’ ಎಂದು ನಿಂದಿಸಿದರು.
ರಾಜ್ಯಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗೆ ಶ್ರೀನಿವಾಸ್ ಮತ ಹಾಕಿಲ್ಲ ಎಂಬ ಕಾರಣ ಮುಂದಿಟ್ಟುಕೊಂಡು, ಕುಮಾರಸ್ವಾಮಿ ಹರಿಹಾಯ್ದಿದಿದ್ದರು. ಅಡ್ಡ ಮತದಾನ ಖಂಡಿಸಿ ಜೆಡಿಎಸ್ ಕಾರ್ಯಕರ್ತರು ನಗರದಲ್ಲಿರುವ ಮನೆ ಎದುರು ಶನಿವಾರ ಪ್ರತಿಭಟನೆ ನಡೆಸಿದರು. ಇದಕ್ಕೆ ಪ್ರತಿಯಾಗಿ ಶ್ರೀನಿವಾಸ್ ಟೀಕಾ ಪ್ರಹಾರ ನಡೆಸಿದ್ದಾರೆ.
‘ಇನ್ನು ಮುಂದೆ ನೋಡಲಿ, ಎಲ್ಲವನ್ನೂ ಬಿಚ್ಚಿಡುತ್ತೇನೆ. ಯಾವುದರಲ್ಲಿ ಪರಿಶುದ್ಧವಾಗಿ ಇದ್ದಾನೆ. ಕಚ್ಚೆ ಸರಿ ಇಲ್ಲ, ಬಾಯಿ ಸರಿ ಇಲ್ಲ. ಇನ್ನೊಬ್ಬರ ಬಗ್ಗೆ ಮಾತನಾಡಲು ಯಾವ ನೈತಿಕತೆ ಇದೆ? ಇವನ ವಿರುದ್ಧ ಹೋರಾಟ ಮಾಡುವುದು ನನ್ನ ಮುಂದಿನ ನಡೆ. ನಾನು ಸೋತರೂ ಪರವಾಗಿಲ್ಲ. ಇವನ ಅಭ್ಯರ್ಥಿಯನ್ನು ಗೆಲ್ಲುವುದಕ್ಕೆ ಬಿಡುವುದಿಲ್ಲ. ಅವನು ಗಂಡಸಾದರೆ ನನ್ನ ಎದುರು ನಿಂತು ಗೆದ್ದು ತೋರಿಸಲಿ. ಆಗ ನನ್ನ ಜೀವನಪೂರ್ತಿ ಅವರ ಮನೆಯಲ್ಲಿ ಕೂಲಿ ಮಾಡುತ್ತೇನೆ’ ಎಂದು ಗುಡುಗಿದರು.




