ಲುಡೋ ಗೇಮ್ ಆಡುವಾಗ ಜಗಳ:
ಬಾಲಕನನ್ನು ಚೂರಿಯಿಂದ ಇರಿದು ಕೊಲೆ
ಕಲಬುರಗಿ: ಅಫಜಲಪುರ ತಾಲೂಕಿನ ಮಾಶ್ಯಾಳ ಗ್ರಾಮದಲ್ಲಿ ಲುಡೋ ಗೇಮ್ ಆಡುವಾಗ ಉಂಟಾದ ಜಗಳ ಬಾಲಕನ ಚೂರಿಯಿಂದ ಇರಿದು ಕೊಲೆ ಮಾಡಿರುವ ಘಟನೆ ಬುಧವಾರ ತಡ ರಾತ್ರಿ ನಡೆದಿದೆ.
ಶಾಮರಾಯ ಪರೀಟ್ (16) ಕೊಲೆಯಾದ ಬಾಲಕ ಎಂದು ಗುರುತಿಸಲಾಗಿದೆ. ಸಚಿನ್ ಕಿರಸಾವಳಗಿ (22) ಎಂಬಾತ ಕೊಲೆ ಮಾಡಿದ್ದಾನೆ ಎಂದು ತಿಳಿದಿದೆ.
ಬುಧವಾರ ಸಂಜೆ ಲುಡೋ ಆಡುವಾಗ ನಾನು ಗೆದ್ದೆ, ನಾನು ಗೆದ್ದೆ ಎಂದು ಜಗಳವಾಡಿದ್ದಾರೆ. ಈ ವೇಳೆ ಶಾಮರಾಯ ಸಹೋದರ ಜಗಳ ಬಿಡಿಸಿ ಸಮಾಧಾನ ಮಾಡಿದ್ದರು. ಆದರೂ, ಸಚಿನ್ ಸಮಾಧಾನಗೊಳ್ಳದೆ ಮನೆಯಿಂದ ಚಾಕು ತಂದು ಶಾಮರಾಯನ ಎದೆಗೆ ಇರಿದಿದ್ದಾನೆ. ಇರಿತದಿಂದ ಗಾಯಗೊಂಡ ಶಾಮರಾಯನನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ತೀವ್ರ ರಕ್ತಸ್ರಾವದಿಂದ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಅಫಜಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.




