ವಿದ್ಯಾರ್ಥಿನಿಯ ಎರಡು ಕಿಡ್ನಿ ವಿಫಲಗೊಂಡ ಹಿನ್ನೆಲೆ:
ಬೆಂಗಳೂರು ಆಸ್ಪತ್ರೆಗೆ ಕೊಂಡೊಯ್ಯುತ್ತಿದ್ದ ವೇಳೆ ನೆಲ್ಯಾಡಿಯಲ್ಲಿ ಮೃತ್ಯು
ನೆಲ್ಯಾಡಿ: ಎರಡೂ ಕಿಡ್ನಿ ವಿಫಲಗೊಂಡಿದ್ದ ಯುವತಿಯೋರ್ವಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ವೇಳೆ ನೆಲ್ಯಾಡಿ ತಲುಪುತ್ತಿದ್ದಂತೆಯೇ ದಾರಿ ಮಧ್ಯೆ ಮೃತಪಟ್ಟ ಘಟನೆ ಸಂಭವಿಸಿದೆ.
ಮೃತ ವಿದ್ಯಾರ್ಥಿನಿಯನ್ನು ತೊಕ್ಕೊಟ್ಟು ಸಮೀಪದ ಸೇವಂತಿಗುಡ್ಡೆ ಪರಿಸರದಲ್ಲಿ ವಾಸವಾಗಿರುವ ರಮೇಶ್ ನಾಯ್ಕ್ ಹಾಗೂ ರೇವತಿ ದಂಪತಿಯ ಹಿರಿಯ ಮಗಳು ತೇಜಸ್ವಿನಿ (15) ಎಂದು ಗುರುತಿಸಲಾಗಿದೆ.
ಎರಡೂ ಕಿಡ್ನಿಗಳು ವೈಫಲ್ಯಕ್ಕೊಳಗಾಗಿ ಮಂಗಳೂರಿನ ವೆನ್ಲಾಕ್ ಜಿಲ್ಲಾಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಈಕೆಗೆ ಡಯಾಲಿಸಿಸ್ ನಡೆಸಲಾಗುತ್ತಿದ್ದು, ಅಲ್ಲದೇ ಆಕೆಗೆ ಬೇರೆ ಕಿಡ್ನಿ ಕಸಿ ಮಾಡಬೇಕೆಂದು ವೈದ್ಯರು ಸಲಹೆ ನೀಡಿದ್ದರು. ಅದರಂತೆ ಇಂದು ತೇಜಸ್ವಿನಿಯನ್ನ ಹೆಚ್ಚಿನ ಚಿಕಿತ್ಸೆಗೆಂದು ಅಂಬುಲೆನ್ಸ್ ಮೂಲಕ ಬೆಂಗಳೂರಿಗೆ ಒಯ್ಯುತ್ತಿದ್ದ ವೇಳೆ ತೀವ್ರ ಉಸಿರಾಟದ ಸಮಸ್ಯೆ ಉಂಟಾಗಿದ್ದು, ದಾರಿ ಮಧ್ಯದ ನೆಲ್ಯಾಡಿಯ ಸ್ಥಳೀಯ ಆಸ್ಪತ್ರೆಯಲ್ಲಿ ಬಾಲಕಿಗೆ ಚಿಕಿತ್ಸೆ ನೀಡಲಾಗಿದೆ. ಆದರೆ ಮಧ್ಯಾಹ್ನದ ವೇಳೆಗೆ ತೇಜಸ್ವಿನಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ ಎಂದು ತಿಳಿದುಬಂದಿದೆ.