September 20, 2024

ವಿಟ್ಲ: ಅಪ್ರಾಪ್ತ ಬಾಲಕಿ ಸಾವು ಪ್ರಕರಣ:
ದಲಿತ್ ಸಂಘಟನೆ ಪ್ರತಿಭಟನೆ

0

ವಿಟ್ಲ: ಕನ್ಯಾನ ಗ್ರಾಮದ ಕಣಿಯೂರು ಎಂಬಲ್ಲಿ ಅಪ್ರಾಪ್ತ ಬಾಲಕಿಯ ಸಾವಿಗೆ ಕಾರಣನಾದ ಆರೋಪಿಗೆ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಮತ್ತು ರಾಜ್ಯದಲ್ಲಿ ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯದ ವಿರುದ್ಧ ದಕ್ಷಿಣ ಕನ್ನಡ ಜಿಲ್ಲಾ ದಲಿತ್ ಸೇವಾ ಸಮಿತಿ ವತಿಯಿಂದ ವಿಟ್ಲದಲ್ಲಿ ಸೋಮವಾರ ಪ್ರತಿಭಟನೆ ನಡೆಯಿತು.

ದ.ಕ ಜಿಲ್ಲಾ ದಲಿತ್ ಸೇವಾ ಸಮಿತಿ ಸ್ಥಾಪಕಾಧ್ಯಕ್ಷ ಬಿ.ಕೆ ಸೇಸಪ್ಪ ಬೆದ್ರಕಾಡು ಅವರು ಮಾತನಾಡಿ ದಲಿತ ಸಂಘಟನೆ ಸಮಾಜದಲ್ಲಿ ಅನ್ಯಾಯಕ್ಕೊಳಗಾದವರ ಧ್ವನಿಯಾಗಿ ಕೆಲಸ ನಿರ್ವಹಿಸಿದೆ. ನಾವು ಯಾವುದೇ ಧರ್ಮ, ಜಾತಿ, ಪಕ್ಷಗಳಿಗೆ ಸೀಮಿತವಾಗಿ ಕೆಲಸ ಮಾಡಿಲ್ಲ. ಶೋಷಿತವರ್ಗದವರ ಪರವಾಗಿ ಕೆಲಸ ಮಾಡುತ್ತಿದ್ದೇವೆ. ನಮ್ಮನ್ನು ಮತ್ತೊಂದು ಧರ್ಮದ ವಿರುದ್ಧ ಎತ್ತಿಕಟ್ಟಿ ನಮ್ಮ ಯುವಕರನ್ನು ಜೈಲಿಗೆ ಅಟ್ಟುವ ಹಿಂದೂ ಸಂಘಟನೆಗಳು ನಮಗೆ ಬೇಡ. ನಮಗೆ ವಿದ್ಯಾಭ್ಯಾಸ ಕೊಡಿ, ನ್ಯಾಯ ಒದಗಿಸುವ ಕೆಲಸಮಾಡಿ ನಿಮಗೆ ಖಂಡಿತಾ ನಾವು ಬೆಂಬಲ ನೀಡುತ್ತೇವೆ. ನಮ್ಮನ್ನು ಹಿಂದೂ ಧರ್ಮದವರ ವಿರುದ್ಧ ಎತ್ತಿಕಟ್ಟುವ ಮುಸ್ಲಿಂ ಸಂಘಟನೆಗಳು ನಮಗೆ ಬೇಡ. ನಮಗೆ ಬಸವಣ್ಣನವರ ತರಹದ ಹಿಂದುಗಳು ಬೇಕು, ಮಹಮ್ಮದ್ ಪೈಂಗಂಬರರಂತಹ ಮುಸಲ್ಮಾನರು ಬೇಕು. ನಮ್ಮನ್ನು ಬಳಸಿಕೊಂಡು ನಮ್ಮನ್ನು ಇತರರ ವಿರುದ್ಧ ಎತ್ತಿಕಟ್ಟುವ ಸಂಘಟನೆಗಳು ನಮಗೆಬೇಡ ಎಂದು ಹೇಳಿದರು.

ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ವೆಲ್ ಅವರು ಆತ್ಮಿಕಾಳ ಸಾವಿನ ವಿಚಾರದಲ್ಲಿ ದಲಿತ್ ಸೇವಾ ಸಮಿತಿ ವಿರುದ್ಧ ಸುಳ್ಳು ಆರೋಪ ಮಾಡಿರುವುದು ಖಂಡನೀಯವಾಗಿದ್ದು, ಅವರ ಹೇಳಿಕೆಯನ್ನು ಖಂಡಿಸುತ್ತೇವೆ. ದಲಿತ್ ಸಮುದಾಯದವರ ಮೇಲೆ ದೌರ್ಜನ್ಯ ನಡೆದಾಗ ದಲಿತ್ ಸೇವಾ ಸಮಿತಿ ಕೈಕಟ್ಟಿ ಕುಳಿತುಕೊಂಡಿಲ್ಲ. ಅದರ ವಿರುದ್ಧ ಕಾನೂನು ಹೋರಾಟ ಮಾಡಿದ್ದು, ಈ ಬಾಲಕಿ ಮೃತಪಟ್ಟ ತಕ್ಷಣವೇ ವಿಟ್ಲ ಪೆÇಲೀಸ್ ಠಾಣೆಗೆ ಮನವಿ ಸಲ್ಲಿಸಿ, ಆರೋಪಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದೇವೆ. ನಮ್ಮ ಜಿಲ್ಲೆಯಲ್ಲಿ ಈ ಹಿಂದೆ ದಲಿತ್ ಸಮುದಾಯದವರ ಮೇಲೆ ಹಲವು ಅತ್ಯಾಚಾರ, ಕೊಲೆ ಪ್ರಕರಣಗಳು ನಡೆದಿದ್ದರೂ ಹಿಂದು ಸಂಘಟನೆಗಳು ಯಾವುದೇ ಪ್ರತಿಭಟನೆ ನಡೆಸಿಲ್ಲ. ಧರ್ಮಸ್ಥಳ ಠಾಣಾ ವ್ಯಾಪ್ತಿಯಲ್ಲಿ ನಡೆದ ದಿನೇಶ್ ಹತ್ಯೆ ಪ್ರಕರಣ, ಪುತ್ತೂರಿನ ಸೊರಕೆಯಲ್ಲಿ ಮುಗೇರ ಸಮುದಾಯದ ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ, ಕೊಳ್ನಾಡು ಗ್ರಾಮದಲ್ಲಿ ಮಾನಭಂಗಕ್ಕೆ ಯತ್ನ, ಸಂಪ್ಯದಲ್ಲಿ ಅಪ್ರಾಪ್ತ ಬಾಲಕಿಗೆ ಗರ್ಭದಾನ ಪ್ರಕರಣ, ಇದೇ ರೀತಿಯ ಹಲವು ಘಟನೆಗಳು ನಡೆದಾಗ ಹಿಂದೂ ಸಂಘಟನೆಗಳು ಮೌನವಾಗಿದ್ದು, ದಲಿತ್ ಸೇವಾ ಸಮಿತಿ ಇದರ ವಿರುದ್ಧ ಹೋರಾಟ ನಡೆಸಿದೆ ಎಂದರು.

ದಲಿತ್ ಸಂಘರ್ಷ ಸಮಿತಿ ಸಂಚಾಲಕ ಆನಂದ ಬೆಳ್ಳಾರೆರವರು ಮಾತನಾಡಿ ಅಪ್ರಾಪ್ರ ಬಾಲಕಿಯ ಸಾವಿನ ವಿಚಾರ ವನ್ನು ನಾವು ಗಂಭೀರವಾಗಿ ತೆಗೆದುಕೊಳ್ಳಲೇಬೇಕು. ನಮ್ಮ ಸಮುದಾಯದ ಹುಡುಗ ಅಥವಾ ಹುಡುಗಿಯರು ಬೇರೊಂದು ಸಮುದಾಯದಿಂದ ಅನ್ಯಾಯಕ್ಕೊಳಗಾಗಿ ಮೃತಪಟ್ಟರೆ ಹಿಂದೂ ಸಂಘಟನೆಗಳು ಅದನ್ನು ರಾಜಕೀಯವಾಗಿ ಬಳಸಿಕೊಳ್ತಿದ್ದಾರೆ. ಇದನ್ನು ನಾವು ತೀವ್ರವಾಗಿ ಖಂಡಿಸಲೇ ಬೇಕಾಗಿದೆ. ಒಳ್ಳೆಯ ಕೆಲಸಕ್ಕೆ ನಮ್ಮ ಬೆಂಬಲ ಸದಾ ಇದೆ. ಬಡಗನ್ನೂರಿನಲ್ಲಿ ಅಮಾಯಕ ಬಾಲಕಿಗೆ ಗರ್ಭದಾನ ಮಾಡಿದ ಪ್ರಕರಣದಲ್ಲಿ ದಲಿತ ಸಂಘಟನೆಗಳು ಬೀದಿಗಿಳಿದು ಹೋರಾಟ ಮಾಡಿದುದರ ಫಲವಾಗಿ ನಾರಾಯಣ ರೈರವರ ಬಂಧನವಾಗ್ತದೆ ಒಂದು ತಿಂಗಳು ಜೈಲಲ್ಲಿ ಇರ್ತಾರೆ. ಆ ಬಳಿಕ ನ್ಯಾಯಾಲಯ ಮಗುವಿನ ಡಿ.ಎನ್.ಎ ಪರೀಕ್ಷೆಗೆ ಆದೇಶ ನೀಡುತ್ತದೆ. ಆದರೆ ನಾರಾಯಣ ರೈ ಡಿ.ಎನ್.ಎ ಪರೀಕ್ಷೆಗೆ ಹೈಕೋರ್ಟ್ ನಿಂದ ಸ್ಟೇ ತಂದಿದ್ದರೆ. ಶರಣ್ ಪಂಪ್ ವೆಲ್ ಗೆ ತಾಕತ್ತಿದ್ದರೆ ಆ ಸ್ಟೇಯನ್ನು ತೆಗೆಸಿ ಹುಡುಗಿಗೆ ನ್ಯಾಯ ಕೊಡಿಸಲಿ ಎಂದು ಆಗ್ರಹಿಸಿದರು.

ಬೆಳಿಗ್ಗೆ ವಿಟ್ಲ ಜೈನ ಬಸದಿ ಬಳಿಯಿಂದ ಮೆರವಣಿಗೆ ಹೊರಟು ನಾಡಕಚೇರಿಯಲ್ಲಿ ಉಪತಹಶೀಲ್ದಾರ್ ವಿಜಯ ವಿಕ್ರಮರವರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.
ಬಂಟ್ವಾಳ ಆದಿ ದ್ರಾವಿಡ ಸಮಾಜ ಸೇವಾ ಸಂಘದ ಅಧ್ಯಕ್ಷ ಹೊನ್ನಪ್ಪ ಕುಂದರ್, ಬಂಟ್ವಾಳ ಮರಾಟಿ ಸೇವಾ ಸಂಘದ ಅಧ್ಯಕ್ಷ ಕೇಶವ ನಾಯ್ಕ್, ಯುವದಲಿತ ಮುಖಂಡ ಅಭಿಷೇಕ್ ಬೆಳ್ಳಿಪ್ಪಾಡಿ, ಬಂಟ್ವಾಳ ಅಂಬೆಡ್ಕರ್ ಸಮಾಜ ಸೇವಾ ಸಂಘದ ಅಧ್ಯಕ್ಷ ಸತೀಶ್ ಅರಳ, ಪುತ್ತೂರು ಮುಗೇರ ಯುವ ವೇದಿಕೆಯ ಅಧ್ಯಕ್ಷ ಶೇಖರ ಮಾಡಾವು,ಪುತ್ತೂರು ತಾಲೂಕು ದಲಿತ್ ಸೇವಾ ಸಮಿತಿ ಅಧ್ಯಕ್ಷ ಅಣ್ಣಪ್ಪ ಕಾರೆಕ್ಕಾಡು, ಉಳ್ಳಾಲ ಶಾಖ ಉಪಾಧ್ಯಕ್ಷೆ ರೇಣುಕಾ, ಜಿಲ್ಲಾ ದಲಿತ್ ಸೇವಾ ಸಮಿತಿ ಗೌರವಾಧ್ಯಕ್ಷ ಸೊಮಪ್ಪ ನಾಯ್ಕ ಮಲ್ಯ, ಜಿಲ್ಲಾಧ್ಯಕ್ಷೆ ಮೀನಾಕ್ಷಿ ನೆಲ್ಲಿಗುಡ್ಡೆ, ಜಿಲ್ಲಾಧ್ಯಕ್ಷ ಚಂದ್ರಶೇಖರ ವಿಟ್ಲ, ಪಾಣೆಮಂಗಳೂರು ಹೋಬಳಿ ದಲಿತ್ ಸೇವಾಸಮಿತಿ ಅಧ್ಯಕ್ಷ ನಾಗೇಶ್ ಮುಡಿಪು, ದಲಿತ್ ಸೇವಾ ಸಮಿತಿ ಉಳ್ಳಾಲ ಶಾಖ ಉಪಾಧ್ಯಕ್ಷೆ ರೇಣುಕಾ, ಪ್ರ. ಕಾರ್ಯದರ್ಶಿ ರೋಹಿತ್ ಉಲ್ಲಾಳ, ಸದಸ್ಯರು ರೇಣುಕ ಮೂಡಂಬೈಲು, ದಲಿತ ಮುಖಂಡರಾದ ವಸಂತ ಪಟ್ಟೆ ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡರು.

Leave a Reply

Your email address will not be published. Required fields are marked *

error: Content is protected !!