December 16, 2025

ಗಾಯಕಿ ಮೃತದೇಹ ಹೆದ್ದಾರಿಯ ಬಳಿ ಪತ್ತೆ: ಇಬ್ಬರು ಆರೋಪಿಗಳ ಬಂಧನ

0
image_editor_output_image-1801489302-1653378225113.jpg

ನವದೆಹಲಿ: ಕಳೆದ 12 ದಿನಗಳಿಂದ ನಾಪತ್ತೆಯಾಗಿದ್ದ ಹರಿಯಾಣ್ವಿ ಗಾಯಕಿ ಸಂಗೀತಾ ಅವರು ಹರಿಯಾಣದ ರೋಹ್ಟಕ್ ಜಿಲ್ಲೆಯ ಹೆದ್ದಾರಿಯೊಂದರ ಬಳಿ ಶವವಾಗಿ ಪತ್ತೆಯಾಗಿದ್ದಾರೆ. ಗಾಯಕಿಯನ್ನು ಕೊಲೆ ಮಾಡಿದ ಆರೋಪದಡಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಸಂಗೀತಾ ದೆಹಲಿಯಲ್ಲಿ ವಾಸವಾಗಿದ್ದರು. ತಮ್ಮ ಗಾಯನದ ವೀಡಿಯೋಗಳನ್ನು ಯೂಟ್ಯೂ‌ಬ್‌ನಲ್ಲಿ ಅಪ್ಲೋಡ್‌‌ ಮಾಡುತ್ತಿದ್ದರು. ಮೇ 11ರಂದು ಆಕೆ ಯಾವುದೋ ಕೆಲಸದ ನಿಮಿತ್ತ ಹೊರ ಹೋಗಿದ್ದವರು ಮರಳಿ ಬಂದಿರಲಿಲ್ಲ. ಹೀಗಾಗಿ ನಾಪತ್ತೆ ದೂರು ದಾಖಲಾಗಿತ್ತು.

ದೂರಿನ ಮೇರೆಗೆ ಪ್ರಕರಣದ ಬೆನ್ನು ಹತ್ತಿದ ಪೊಲೀಸರು ಸಂತ್ರಸ್ತೆಯ ಪರಿಚಿತರಾದ ರವಿ ಮತ್ತು ಅನಿಲ್ ಅವರನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಅಪಹರಿಸಿ ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ.

ಇಬ್ಬರು ಆರೋಪಿಗಳ ವಿರುದ್ದ ಅಪಹರಣ, ಕೊಲೆ ಮತ್ತು ಸಾಕ್ಷ್ಯ ಮರೆಮಾಚಿದ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹರಿಯಾಣದ ಮೆಹಮ್‌ನಿಂದ ಮೇ 21ರಂದು ಆರೋಪಿಗಳನ್ನು ಬಂಧಿಸಲಾಗಿದೆ. ವಿಚಾರಣೆ ಸಮಯದಲ್ಲಿ ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ.

ಈ ಪೈಕಿ ಒಬ್ಬಾತ ಗಾಯಕಿಗೆ ಕರೆ ಮಾಡಿ ಮ್ಯೂಸಿಕ್‌ ವೀಡಿಯೋ ಮಾಡಲು ಭೇಟಿಯಾಗುವಂತೆ ಹೇಳಿದ್ದ. ಆಕೆ ಅದಕ್ಕಾಗಿ ಆಗಮಿಸಿದಾಗ ಮಾದಕ ವಸ್ತು ನೀಡಿ ಕೊಲೆ ಮಾಡಲಾಗಿದೆ.

ಬಳಿಕ ರೋಹ್ಟಕ್ ಹೆದ್ದಾರಿ ಬಳಿ ಶವವನ್ನು ಸಮಾಧಿ ಮಾಡಿದ್ದರು ಎಂದು ಪೊಲೀಸ್ ಉಪ ಕಮಿಷನರ್ (ದ್ವಾರಕಾ) ಶಂಕರ್ ಚೌಧರಿ ಮಾಹಿತಿ ನೀಡಿದ್ದಾರೆ ಎಂದು ವರದಿಯಾಗಿದೆ. ಶವವನ್ನು ಸೋಮವಾರ ಪರೀಕ್ಷೆಗೆ ಕಳುಹಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!