ಮಾನಸಿಕ ಖಿನ್ನತೆಗೊಳಗಾಗಿ ಕೈದಿ ಜೈಲಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ
ಬೆಂಗಳೂರು: ಜಾಮೀನು ನೀಡಲು ಕುಟುಂಬ ಸದಸ್ಯರು ಬರಲಿಲ್ಲ ಎಂದು ಮಾನಸಿಕ ಖನ್ನತೆಗೊಳಗಾದ ಕೈದಿಯೊಬ್ಬ ಜೈಲಿನಲ್ಲಿ ನೇಣು ಬಿಗಿದುಕೊಂಡು ಆತ್ಮ ಹತ್ಯೆ ಮಾಡಿಕೊಂಡಿರುವ ಘಟನೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ನಡೆದಿದೆ.
ಆಜಾದ್ ನಗರದ ಮನೋಜ್ ಅಲಿಯಾಸ್ ಹೂವು(36) ಆತ್ಮಹತ್ಯೆ ಮಾಡಿಕೊಂಡ ಕೈದಿ. ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದ 8ನೇ ಬ್ಯಾರಕ್‌ನ ಶೌಚಾಲಯದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮನೋಜ್ ಪದೇ ಪದೆ ಅಪರಾಧ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದ. ರಂಜಾನ್ ಸಮಯದಲ್ಲಿ ಕೆಲವು ಹುಡುಗರನ್ನು ಗುಂಪು ಸೇರಿಸಿಕೊಂಡು ಚಾಮರಾಜ ಪೇಟೆ ಠಾಣೆ ವ್ಯಾಪ್ತಿಯಲ್ಲಿ ಗಲಾಟೆ ಮಾಡುತ್ತಿದ್ದ.
ಅಲ್ಲದೇ, ಬೈಕ್ ಕಳವು ಪ್ರಕರಣವೊಂದರಲ್ಲಿ ಚಾಮರಾಜ ಪೇಟೆ ಪೊಲೀಸರು ಮನೋಜ್‌ನನ್ನು ಮೇ 1ರಂದು ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಿದ್ದರು. ಸೋಮವಾರ ಬೆಳಗ್ಗೆ ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ.




