ಉಳ್ಳಾಲ: ಪತ್ನಿಯ ತಲೆಗೆ ದೊಣ್ಣೆಯಿಂದ ಹೊಡೆದು ಕೊಲೆ: ಆರೋಪಿ ಪತಿಯ ಬಂಧನ
ಉಳ್ಳಾಲ: ಪತ್ನಿಯ ತಲೆಗೆ ದೊಣ್ಣೆಯಿಂದ ಹೊಡೆದು ಕೊಲೆ ಮಾಡಿದ ಘಟನೆ ಕುಂಪಲದಲ್ಲಿ ನಡೆದಿದ್ದು, ಆರೋಪಿ ಪತಿ ಜೋಸೆಫ್ ಫ್ರಾನ್ಸಿಸ್ (54) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಕೊಚ್ಚಿ ನಿವಾಸಿ ಜೋಸೆಫ್ ಎಂಬವರ ಪುತ್ರಿ ಶೈಮಾ (44) ಎಂಬವರನ್ನು ಜೋಸೆಫ್ ಫ್ರಾನ್ಸಿಸ್ ಎಂಬಾತನಿಗೆ ವಿವಾಹ ಮಾಡಿಕೊಡಲಾಗಿದ್ದು, ಅವರು ಉಳ್ಳಾಲ ಠಾಣೆ ವ್ಯಾಪ್ತಿಯ ಕುಂಪಲದಲ್ಲಿ ವಾಸವಾಗಿದ್ದರು.
ಮೇ 11ರಂದು ಕ್ಷುಲ್ಲಕ ವಿಚಾರವೊಂದಕ್ಕೆ ಅವರ ನಡುವೆ ಜಗಳ ನಡೆದಿದೆ. ಈ ಸಂದರ್ಭ ಜೋಸೆಫ್ ಫ್ರಾನ್ಸಿಸ್ ಪತ್ನಿ ಶೈಮಾರಿಗೆ ದೊಣ್ಣೆಯಿಂದ ತಲೆಗೆ ಹೊಡೆದಿದ್ದು, ಇದರಿಂದ ಗಂಭೀರ ಸ್ಥಿತಿಯಲ್ಲಿದ್ದ ಶೈಮಾ ವಿಷ ಸೇವಿಸಿದ್ದರು ಎನ್ನಲಾಗಿದ್ದು, ತಕ್ಷಣ ಅವರನ್ನು ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅದೇ ದಿನ ರಾತ್ರಿ ಅವರು ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಶೈಮಾರ ತಂದೆ ಕೊಚ್ಚಿ ನಿವಾಸಿ ಜೋಸೆಫ್ ಉಳ್ಳಾಲ ಠಾಣೆಗೆ ದೂರು ನೀಡಿದ್ದಾರೆ.
ಆಸ್ಪತ್ರೆಯಿಂದ ಬಂದ ವರದಿಯಂತೆ ಉಳ್ಳಾಲ ಪೊಲೀಸರು ಆರಂಭದಲ್ಲಿ ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದರು. ಬಳಿಕ ಆಸ್ಪತ್ರೆಯಲ್ಲಿ ನಡೆದ ಶವ ಮಹಜರು ಪರೀಕ್ಷೆಯಲ್ಲಿ ಮಹಿಳೆ ತಲೆಗೆ ಬಡಿದು ಕೊಲೆ ನಡೆಸಿರುವುದು ಸಾಬೀತಾಗಿದೆ. ತತ್‌ಕ್ಷಣ ಉಳ್ಳಾಲ ಪೊಲೀಸರು ಆರೋಪಿ ಪತಿಯನ್ನು ವಿಚಾರಣೆ ನಡೆಸಿದಾಗ ಕೊಲೆಕೃತ್ಯ ಬಯಲಾಗಿದೆ.
ಜೋಸೆಫ್ ಪೆಟ್ರೋಲ್ ಬಂಕ್ ನಿರ್ಮಾಣ ಗುತ್ತಿಗೆ ನಡೆಸುತ್ತಿದ್ದು, ಕೇರಳದಲ್ಲಿದ್ದ ಈತ ಐದು ದಿನಗಳ ಹಿಂದೆಯಷ್ಟೇ ಆಗಮಿಸಿದ್ದ. ಕುಡಿಯುವ ವಿಚಾರದಲ್ಲಿ ಗಲಾಟೆ ನಡೆದಿದ್ದು, ಈ ಸಂದರ್ಭದಲ್ಲಿ ಶೈಮಾಳಿಗೆ ಹೊಡೆದಿದ್ದ. ವೈದ್ಯರು ನೀಡಿದ ವರದಿಯಂತೆ ಕೊಲೆ ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಜೋಸೆಫ್ ಫ್ರಾನ್ಸಿಸ್‍ನನ್ನು ಶನಿವಾರ ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಹೆಚ್ಚುವರಿ ತನಿಖೆಗಾಗಿ ಉಳ್ಳಾಲ ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ.




