ನಾಟಿವೈದ್ಯ ಶಬ್ಬಾ ಷರೀಫ್ ಹತ್ಯೆ ಪ್ರಕರಣ: 3 ವರ್ಷಗಳ ಬಳಿಕ ಮೂವರು ಆರೋಪಿಗಳ ಬಂಧನ
ಮೈಸೂರು: ಇಲ್ಲಿನ ಜನತಾನಗರ ಸಮೀಪದ ವಸಂತನಗರದಲ್ಲಿ 3 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಜನಪ್ರಿಯ ನಾಟಿವೈದ್ಯ ಶಬ್ಬಾ ಷರೀಫ್ ಬರ್ಬರವಾಗಿ ಹತ್ಯೆಯಾಗಿದ್ದು, ಮೂವರು ಆರೋಪಿಗಳನ್ನು ಕೇರಳದ ಮಲಪ್ಪುರಂ ಜಿಲ್ಲೆಯ ಪೊಲೀಸರು ಗುರುವಾರ ಬಂಧಿಸಿದ್ದಾರೆ.
‘ವಸಂತನಗರದಲ್ಲಿ ಮೂಲವ್ಯಾಧಿ ಕಾಯಿಲೆಗೆ ನಾಟಿ ಔಷಧ ನೀಡುತ್ತಿದ್ದ ಶಬ್ಬಾ ಷರೀಫ್ ಅವರ ಬಳಿ ಕೇರಳದಿಂದ ಹೆಚ್ಚಿನ ಮಂದಿ ಬಂದು ಔಷಧ ಪಡೆದು ಗುಣಮುಖರಾಗುತ್ತಿದ್ದರು. ಇದು ಕೇರಳದಲ್ಲಿ ಹೆಚ್ಚಿನ ಪ್ರಸಿದ್ಧಿಯನ್ನು ಅವರಿಗೆ ತಂದುಕೊಟ್ಟಿತ್ತು. ಈ ಔಷಧದ ರಹಸ್ಯ ತಿಳಿದು ದುಬೈ ಸೇರಿದಂತೆ ವಿದೇಶದಲ್ಲಿ ಈ ಔಷಧವನ್ನು ಮಾರಾಟ ಮಾಡಿ ಹಣ ಸಂಪಾದಿಸುವ ಉದ್ದೇಶದಿಂದ ಇವರ ಕೊಲೆ ನಡೆದಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.
ವಸಂತನಗರದ ಷರೀಫ್ ಅವರ ನಿವಾಸಕ್ಕೆ 2019ರ ಆಗಸ್ಟ್ ತಿಂಗಳಿನಲ್ಲಿ ಬಂದ ಇಬ್ಬರು ಔಷಧ ನೀಡಬೇಕೆಂದು ಹೇಳಿ ಕರೆದುಕೊಂಡು ಹೊರಟರು. ನಂತರ, ಷರೀಫ್ ಅವರ ಕುಟುಂಬದವರು ನಾಪತ್ತೆ ಪ್ರಕರಣವನ್ನು ಸರಸ್ವತಿಪುರಂ ಠಾಣೆಯಲ್ಲಿ ದಾಖಲಿಸಿದ್ದರು. ಮೊಬೈಲ್ ನೆಟ್‌ವರ್ಕ್‌ನ ಬೆನ್ನತ್ತಿದ್ದ ಪೊಲೀಸರು ಕೇರಳದವರೆಗೂ ಹೋಗಿ ಹುಡುಕಿ ವಾಪಸ್ ಬಂದಿದ್ದರು.




