March 20, 2026

ಮತಾಂತರ ನಿಷೇಧ ಕಾಯ್ದೆ ಜಾರಿಗೊಳಿಸುವ ಬಿಜೆಪಿ ಸರಕಾರದ ಅಸಂವಿಧಾನಿಕ ನಡೆಯನ್ನು ನಾಗರಿಕರು ಪ್ರತಿರೋಧಿಸಬೇಕು: ಪಾಪ್ಯುಲರ್‌ ಫ್ರಂಟ್‌

0
IMG-20220513-WA0023.jpg

ಮತಾಂತರ ನಿಷೇಧ ಕಾಯ್ದೆಯನ್ನು ಸುಗ್ರಿವಾಜ್ಞೆ ಮೂಲಕ ಜಾರಿಗೊಳಿಸಲು ಹೊರಟಿರುವ ರಾಜ್ಯ ಬಿಜೆಪಿ ಸರಕಾರದ ಕ್ರಮವು ಅಸಾಂವಿಧಾನಿಕವಾಗಿದ್ದು, ಇದು ಅಲ್ಪಸಂಖ್ಯಾತರನ್ನು ಮತ್ತಷ್ಟು ಗುರಿಪಡಿಸುವ ದುರುದ್ದೇಶವನ್ನು ಹೊಂದಿದೆ. ಅಲ್ಪಸಂಖ್ಯಾತರ ವಿರೋಧಿಯಾಗಿರುವ ಬಿಜೆಪಿ ಧಾರ್ಮಿಕ ಸ್ವಾತಂತ್ರ್ಯವು ಹಕ್ಕನ್ನು ಬಲವಂತದ ಕಾನೂನಿನ ಮೂಲಕ ದಮನಿಸಲು ಪ್ರಯತ್ನಿಸುತ್ತಿದೆ.

ಈಗಾಗಲೇ ಮಧ್ಯ ಪ್ರದೇಶ, ಗುಜರಾತ್‌, ಉತ್ತರ ಪ್ರದೇಶ, ಉತ್ತರಾಖಂಡ್, ಜಾರ್ಖಂಡ್‌ ಮೊದಲಾದ ಬಿಜೆಪಿ ಆಡಳಿತ ರಾಜ್ಯಗಳಲ್ಲಿ ಈ ವಿವಾದಿತ ಮತಾಂತರ ವಿರೋಧಿ ಕಾನೂನು ಜಾರಿಯಲ್ಲಿದ್ದು, ಇದು ಪ್ರಮುಖವಾಗಿ ಮುಸ್ಲಿಮ್, ಕ್ರಿಶ್ಚಿಯನ್, ದಲಿತ ಮತ್ತು ಆದಿವಾಸಿ ಸಮುದಾಯಗಳನ್ನು ವ್ಯವಸ್ಥಿತವಾಗಿ ಗುರಿಪಡಿಸುತ್ತಿರುವುದು ವರದಿಯಾಗಿದೆ. ರಾಜ್ಯದಲ್ಲಿ ಸಂಘಪರಿವಾರದ ಶಕ್ತಿಗಳು ಭಾವನಾತ್ಮಕ ವಿಚಾರಗಳ ಮೂಲಕ ರಾಜ್ಯದ ಅಲ್ಪಸಂಖ್ಯಾತರನ್ನು ನಿರಂತರವಾಗಿ ಬೇಟೆಯಾಡುತ್ತಿದ್ದು, ಈ ಕಾನೂನನ್ನು ಅವರು ಮತ್ತೊಂದು ಅಸ್ತ್ರವಾಗಿ ಬಳಸುವುದರಲ್ಲಿ ಯಾವುದೇ ಸಂಶಯವಿಲ್ಲ. ಆದಾಗ್ಯೂ ಪ್ರಸಕ್ತ ಬಿಜೆಪಿ ಸರಕಾರವು ಭ್ರಷ್ಟಾಚಾರ, ಹಗರಣದಲ್ಲಿ ಮುಳುಗಿ ಹೋಗಿದ್ದು, ಜನರಿಂದ ಬಹಳಷ್ಟು ಟೀಕೆಗಳನ್ನು ಎದುರಿಸುತ್ತಿದೆ. ಸಚಿವ ಸಂಪುಟದ ಈ ತುರ್ತು ನಿರ್ಧಾರವನ್ನು ಜನರ ಹಾದಿ ತಪ್ಪಿಸುವ ಪ್ರಯತ್ನದ ಭಾಗವಾಗಿಯೂ ನೋಡಬೇಕಾಗುತ್ತದೆ.

ದಮನಿತ ವರ್ಗಗಳನ್ನು ವಿಶೇಷವಾಗಿ ಅಲ್ಪಸಂಖ್ಯಾತರನ್ನು ಗುರಿಪಡಿಸುವ ಈ ಕಾನೂನನ್ನು ರಾಜ್ಯ ಸರಕಾರವು ಯಾವುದೇ ಕಾರಣಕ್ಕೂ ಜಾರಿಗೆ ತರಬಾರದು. ರಾಜ್ಯಪಾಲರು ಕೂಡ ಇದಕ್ಕೆ ಅಂಕಿತ ಹಾಕದೇ ನಾಗರಿಕರ ಧಾರ್ಮಿಕ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯಬೇಕು ಮತ್ತು ಅಲ್ಪಸಂಖ್ಯಾತರ ಸಾಂವಿಧಾನಿಕ ಹಕ್ಕುಗಳನ್ನು ಖಾತರಿಪಡಿಸಬೇಕು. ಹಾಗೆಯೇ ಸುಗ್ರೀವಾಜ್ಞೆಗಳ ಮೂಲಕ ಜನ ವಿರೋಧಿ ಕಾನೂನುಗಳನ್ನು ಜಾರಿಗೆ ತರುತ್ತಿರುವ ಬಿಜೆಪಿ ಸರಕಾರದ ನಡೆಗಳನ್ನು ಪ್ರಜಾಸತ್ತಾತ್ಮಕ ವಿಧಾನದಲ್ಲಿ ಪ್ರತಿರೋಧಿಸಲು ನಾಗರಿಕ ಸಮುದಾಯವು ಮುಂದೆ ಬರಬೇಕು.

Leave a Reply

Your email address will not be published. Required fields are marked *

error: Content is protected !!