ಪಡುಬಿದ್ರಿ: ಸಿಲಿಂಡರ್ ಹೇರಿಕೊಂಡು ಹೋಗುತ್ತಿದ್ದ ಲಾರಿಯಲ್ಲಿ ಬೆಂಕಿ: ಸ್ಥಳೀಯರ ಸಮಯಪ್ರಜ್ಞೆಯಿಂದ ತಪ್ಪಿದ ಭಾರೀ ದುರಂತ
ಪಡುಬಿದ್ರಿ: ಮಂಗಳೂರಿನಿಂದ ಉಡುಪಿಯತ್ತ ಎಚ್‌ಪಿ ಗ್ಯಾಸ್ ತುಂಬಿದ ಸಿಲಿಂಡರ್‌ಗಳನ್ನು ಹೇರಿಕೊಂಡು ಹೋಗುತ್ತಿದ್ದ ಲಾರಿಯ ಚಾಲಕ ಚಹಾ ಸವಿಯಲು ಹೆಜಮಾಡಿಯ ನವಯುಗ ಟೋಲ್‌ಪ್ಲಾಝಾ ಸಮೀಪ ಇಳಿದಿದ್ದ ವೇಳೆ ಲಾರಿಯಲ್ಲಿ ಅನಿರೀಕ್ಷಿತ ಬೆಂಕಿ ಕಾಣಿಸಿಕೊಂಡಿದೆ. ಸ್ಥಳೀಯರ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತವೊಂದು ತಪ್ಪಿದೆ.
ಗುರುವಾರ ರಾತ್ರಿಯ ವೇಳೆ ಹೆಜಮಾಡಿಗೆ ಬಂದಿದ್ದ ಸಂದರ್ಭದಲ್ಲಿ ಲಾರಿ ಚಾಲಕನು ಪೂರ್ಣ ನಿಲುಗಡೆಗೊಳಿಸಿ ಕೆಳಗಿಳಿದು ಚಹಾ ಸವಿಯಲು ತೆರಳುತ್ತಿದ್ದರು. ಆ ವೇಳೆಗೆ ಚಾಲಕನ ಸೀಟಿನ ಹಿಂಬದಿಯ ತಳಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ಅಲ್ಲೇ ಹತ್ತಿರದ ಗೂಡಂಗಡಿಗಳ ಮಂದಿ, ಟೋಲ್ ಪ್ಲಾಝಾ ಸಿಬಂದಿ ಹಾಗೂ ಸ್ಥಳೀಯರು ಬಕೆಟ್‌ಗಳಲ್ಲೇ ನೀರನ್ನು ಸುರಿದು ಬೆಂಕಿಯನ್ನು ನಂದಿಸಿದ್ದಾರೆ. ಆ ಹೊತ್ತಿಗಾಗಲೇ ಪಡುಬಿದ್ರಿ ಠಾಣಾಧಿಕಾರಿ ಪುರುಷೋತ್ತಮ್ ಹಾಗೂ ಸಿಬಂದಿಗಳು ಸ್ಥಳಕ್ಕೆ ಧಾವಿಸಿದ್ದಾರೆ.





