ಬುಲ್ಡೋಜರ್‌ಗೆ ಅಡ್ಡ ನಿಂತ ಮಕ್ಕಳು-ಮಹಿಳೆಯರು: ಶಾಹೀನ್ ಬಾಗ್ ತೆರವು ಕಾರ್ಯ ಸ್ಥಗಿತ
ನವದೆಹಲಿ: ದೆಹಲಿಯ ಶಾಹೀನ್ ಬಾಗ್‌ನಲ್ಲಿ ಅಕ್ರಮ ಕಟ್ಟಡಗಳ ನೆಲಸಮ ಕಾರ್ಯಾಚರಣೆಗೆ ದಕ್ಷಿಣ ದೆಹಲಿ ಪಾಲಿಕೆ ಮುಂದಾಗಿದ್ದು, ಮಹಿಳೆಯರು, ಮಕ್ಕಳು ಸೇರಿದಂತೆ ನೂರಾರು ಜನರು ವಿರೋಧ ವ್ಯಕ್ತಪಡಿಸಿದ್ದಾರೆ. ಬುಲ್ಡೋಜರ್ ಜೊತೆ ಬಂದಿದ್ದ ತೆರವು ಕಾರ್ಯಾಚರಣೆ ತಂಡದ ಅಧಿಕಾರಿಗಳು ಯಾವುದೇ ಕ್ರಮ ಜರುಗಿಸದೆ ವಾಪಸ್ ಆಗಿದ್ದಾರೆ.
ಬಿಜೆಪಿ ಆಡಳಿತವಿರುವ ದಕ್ಷಿಣ ದೆಹಲಿಯ ಮುನ್ಸಿಪಲ್ ಕಾರ್ಪೊರೇಶನ್(ಎಸ್‌ಡಿಎಂಸಿ) ಮತ್ತು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು, ಕಟ್ಟಡಗಳ ನೆಲಸಮ ಕಾರ್ಯಾಚರಣೆ ನಿಲ್ಲಿಸುವಂತೆ ಒತ್ತಾಯಿಸಿದ್ದರು. ಕೆಲ ಮಹಿಳೆಯರು ಬುಲ್ಡೋಜರ್ ಮುಂದೆ ನಿಂತು ಕಾರ್ಯಾಚರಣೆಗೆ ವಿರೋಧ ವ್ಯಕ್ತಪಡಿಸಿದರು. ಇದಕ್ಕೂ ಮುನ್ನ, ಎಎಪಿ ಮತ್ತು ಕಾಂಗ್ರೆಸ್ ಸದಸ್ಯರೂ ಸಹ ಸ್ಥಳದಲ್ಲಿ ಪ್ರತಿಭಟನೆ ನಡೆಸಿದ್ದರು.
ಪ್ರತಿಭಟನೆ ಹಿನ್ನೆಲೆಯಲ್ಲಿ ಶಾಹೀನ್ ಬಾಗ್, ಕಲಿಂಡಿ ಕುಂಜ್, ಸರಿತಾ ವಿಹಾರ್, ಮಥುರಾ ರಸ್ತೆ ಮುಂತಾದ ಕಡೆ ವಾಹನ ದಟ್ಟಣೆ ಉಂಟಾಗಿತ್ತು. ಪ್ರತಿಭಟನೆಯಿಂದಾಗಿ ಅಕ್ರಮ ಕಟ್ಟಡಗಳ ತೆರವು ಸಾಧ್ಯವಾಗಿಲ್ಲ ಎಂದು ಎಸ್‌ಡಿಎಂಸಿ ಕೇಂದ್ರ ವಲಯದ ಅಧಿಕಾರಿ ರಾಜ್‌ಪಾಲ್ ಸಿಂಗ್ ಹೇಳಿದ್ದಾರೆ.
2019ರ ಪೌರತ್ವ ಕಾಯ್ದೆ ವಿರೋಧಿ ಹೋರಾಟದ ಮೂಲಕ ಶಾಹೀನ್ ಬಾಗ್ ಗಮನ ಸೆಳೆದಿತ್ತು. ಕೋವಿಡ್ ಉಲ್ಬಣಗೊಂಡ ಬಳಿಕ ಮಾರ್ಚ್ 2020ರಲ್ಲಿ ಪ್ರತಿಭಟನೆ ಕೈಬಿಡಲಾಗಿತ್ತು. ಇದೇ ವೇಳೆ ಶಾಹೀನ್ ಬಾಗ್‌ನ ಅಕ್ರಮ ಕಟ್ಟಡಗಳ ತೆರವು ಕಾರ್ಯಾಚರಣೆಯ ವಿರುದ್ಧ ಸಿಪಿಐ(ಎಂ) ಸಲ್ಲಿಸಿರುವ ಅರ್ಜಿಯನ್ನು ಪರಿಗಣಿಸಲು ಸುಪ್ರೀಂ ಕೋರ್ಟ್ ಸೋಮವಾರ ನಿರಾಕರಿಸಿದ್ದು, ರಾಜಕೀಯ ಪಕ್ಷದ ಅರ್ಜಿ ಆಧರಿಸಿ ಅತಿಕ್ರಮಣ ವಿರೋಧಿ ಕಾರ್ಯಾಚರಣೆಯಲ್ಲಿ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ ಎಂದು ಹೇಳಿದೆ.
ನ್ಯಾಯಮೂರ್ತಿಗಳಾದ ಎಲ್ ನಾಗೇಶ್ವರ ರಾವ್ ಮತ್ತು ಬಿ ಆರ್ ಗವಾಯಿ ಅವರಿದ್ದ ಪೀಠವು ದೆಹಲಿ ಹೈಕೋರ್ಟ್ ಮುಂದೆ ಹೋಗುವಂತೆ ಅರ್ಜಿದಾರರಿಗೆ ಸೂಚಿಸಿದೆ.




