ಉಡುಪಿ: ನಕ್ಸಲ್ ಚಟುವಟಿಕೆಗಳಲ್ಲಿ ಗುರುತಿಸಿಕೊಂಡ ಇಬ್ಬರನ್ನು ಉಡುಪಿಗೆ ಕರೆತಂದ ಪೊಲೀಸರು
ಉಡುಪಿ: ಪಶ್ಚಿಮ ಘಟ್ಟ ಭಾಗದ ನಕ್ಸಲ್ ಚಳವಳಿಯ ಪ್ರಮುಖ ನಾಯಕ ಬಿ.ಜಿ.ಕೃಷ್ಣಮೂರ್ತಿ ಮತ್ತು ನಕ್ಸಲ್ ಸದಸ್ಯೆ, ಸಾವಿತ್ರಿ ಅವರನ್ನು ಕಾರ್ಕಳ, ಹೆಬ್ರಿ, ಅಜೆಕಾರು ಠಾಣೆಗಳ ವ್ಯಾಪ್ತಿಯ ವಿವಿಧ ಪ್ರಕರಣಗಳಿಗೆ ಸಂಬಂಧಿಸಿ ಪೊಲೀಸ್ ಹಾಗೂ ನ್ಯಾಯಾಂಗ ತನಿಖೆಗಾಗಿ ಚಿಕ್ಕಮಗಳೂರಿನಿಂದ ಮೇ 4ರಂದು ಉಡುಪಿ ಜಿಲ್ಲೆಗೆ ಬಿಗು ಪೊಲೀಸ್ ಬಂದೋಬಸ್ತಿನಲ್ಲಿ ಕರೆತಂದಿದ್ದಾರೆ.
ನಕ್ಸಲ್ ಚಟುವಟಿಕೆಗಳಲ್ಲಿ ಗುರುತಿಸಿಕೊಂಡು ನ್ಯಾಯಾಂಗ ಬಂಧನದಲ್ಲಿರುವ ಬಿ.ಜಿ. ಕೃಷ್ಣಮೂರ್ತಿ ಮತ್ತು ಸಾವಿತ್ರಿ ಇವರಿಬ್ಬರನ್ನು 20 ದಿನಗಳ ಕಾಲ ಪೊಲೀಸ್ ಕಸ್ಟಡಿಯಲ್ಲಿ ಸುಮಾರು 12ಕ್ಕೂ ಅಧಿಕ ಪ್ರಕರಣಗಳಿಗೆ ಸಂಬಂಧಿಸಿ ವಿಚಾರಣೆಗೆ ಒಳಪಡಿಸಲಾಗುವುದು ಎಂದು ತಿಳಿದುಬಂದಿದೆ.
2005ರಲ್ಲಿ ಸಾಕೇತ್ ರಾಜನ್ ಹತ್ಯೆ ಬಳಿಕ ನಕ್ಶಲ್ ಚಟುವಟಿಕೆಯ ನಾಯಕತ್ವ ವಹಿಸಿಕೊಂಡಿದ್ದ ಬಿ.ಜಿ ಕೃಷ್ಣಮೂರ್ತಿಯನ್ನು ಕರ್ನಾಟಕದ ಗಡಿ ವಯನಾಡಿನಲ್ಲಿ 2021 ನಂಬರ್ 9ರಂದು ಬಂಧಿಸಲಾಗಿತ್ತು. ಬಿ.ಜಿ ಕೃಷ್ಣಮೂರ್ತಿ ಮೇಲೆ 53 ಹಾಗೂ ಕೇರಳ ವಯನಾಡಿನ ಕೊಯಿಕ್ಕೋಡ್ ಕಬಿನಿ ದಳದ ಮುಖ್ಯಸ್ಥೆ ಸಾವಿತ್ರಿ ಮೇಲೆ 22 ಪ್ರಕರಣಗಳಿವೆ.
ಇಬ್ಬರು ಪ್ರಮುಖ ನಕ್ಸಲ್ ಮುಖಂಡರ ವಿಚಾರಣೆಯ ಹಿನ್ನಲೆಯಲ್ಲಿ ಕಾರ್ಕಳ ತಾಲೂಕಿನಲ್ಲಿ ಬಿಗು ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ನಕ್ಸಲರನ್ನು ಇರಿಸುವ ಠಾಣೆಗಳಲ್ಲಿ 120ಕ್ಕೂ ಅಧಿಕ ಪೊಲೀಸರನ್ನು ನಿಯೋಜಿಸಲಾಗುತ್ತಿದೆ ಎಂದು ತಿಳಿದುಬಂದಿದೆ.