ಕಳ್ಳತನದ ಆರೋಪ: ವ್ಯಕ್ತಿಯನ್ನು ಮರಕ್ಕೆ ತಲೆಕೆಳಗಾಗಿ ನೇತುಹಾಕಿ ದೊಣ್ಣೆಗಳಿಂದ ಹಲ್ಲೆ ನಡೆಸಿದ ತಂಡ
ಛತ್ತೀಸ್‌ಗಢ: ಛತ್ತೀಸ್‌ಗಢದ ಬಿಲಾಸ್‌ಪುರ ಜಿಲ್ಲೆಯಲ್ಲಿ ಐವರು ಯುವಕರು ವ್ಯಕ್ತಿಯೊಬ್ಬನನ್ನು ಮರಕ್ಕೆ ತಲೆಕೆಳಗಾಗಿ ನೇತುಹಾಕಿ ದೊಣ್ಣೆಗಳಿಂದ ಥಳಿಸಿರುವ ಘಟನೆ ನಡೆದಿದ್ದು, ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಥಳತಕ್ಕೊಳಗಾದ ವ್ಯಕ್ತಿಯನ್ನು ಮಹಾವೀರ್ ಸೂರ್ಯವಂಶಿ ಎಂದು ಗುರುತಿಸಲಾಗಿದ್ದು, ಬಂಧಿತರನ್ನು ಮನೀಷ್ ಖರೆ, ಶಿವರಾಜ್ ಖರೆ, ಜಾನು ಭಾರ್ಗವ್, ಭೀಮ್ ಕೇಸರವಾಣಿ ಮತ್ತು 15 ವರ್ಷದ ಬಾಲಕ ಎಂದು ಗುರುತಿಸಲಾಗಿದೆ.
ಏಪ್ರಿಲ್ 25 ರಂದು ಸೂರ್ಯವಂಶಿ ತನ್ನ ಮನೆಗೆ ನುಸುಳಲು ಪ್ರಯತ್ನಿಸುತ್ತಿರುವುದನ್ನು ಮನೀಶ್ ಗಮನಿಸಿ, ಹಿಡಿಯಲು ಯತ್ನಿಸಿದ್ದಾನೆ. ಈ ವೇಳೆ ಸೂರ್ಯವಂಶಿ ತಪ್ಪಿಸಿಕೊಂಡಿದ್ದ. ಮರುದಿನ ಮನೀಶ್ ಅವನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾನೆ.
ಅವನು ಕಳ್ಳತನ ಮಾಡಲು ಪ್ರಯತ್ನಿಸುತ್ತಿದ್ದಾನೆ ಎಂದು ಹೇಳಿದ್ದಾರೆ. ಆದರೆ ಮನೀಶ್ ಸೂರ್ಯವಂಶಿ ವಿರುದ್ಧ ಎಫ್‌ಐಆರ್ ದಾಖಲಿಸಿಲ್ಲ. ನಂತರ ಪೊಲೀಸರು ಎಚ್ಚರಿಕೆ ನೀಡಿ ಬಿಡುಗಡೆ ಮಾಡಿದರು.
ಇನ್ನು ಬುಧವಾರ ರಾತ್ರಿ ಸೂರ್ಯವಂಶಿ ಮತ್ತೆ ತನ್ನ ಮನೆಗೆ ಬಂದು ಹೊರಗೆ ನಿಲ್ಲಿಸಿದ್ದ ಮೋಟಾರ್ ಸೈಕಲ್‌ಗೆ ಹಾನಿ ಮಾಡಿ ಪರಾರಿಯಾಗಿದ್ದಾನೆ ಎಂದು ಮನೀಶ್ ಹೇಳಿದ್ದು, ಈ ಕಾರಣದಿಂದಾಗಿ ಗುರುವಾರ ಮನೀಶ್ ಮತ್ತು ಇತರ ನಾಲ್ವರು ಗ್ರಾಮದ ಇಟ್ಟಿಗೆ ಗೂಡು ಬಳಿಯ ಮರದಿಂದ ಸೂರ್ಯವಂಶಿಯನ್ನು ತಲೆಕೆಳಗಾಗಿ ಕಟ್ಟಿಹಾಕಿ ದೊಣ್ಣೆಗಳಿಂದ ಥಳಿಸಿದ್ದಾರೆ ಎಂದು ತಿಳಿದು ಬಂದಿದೆ