ಭಾರತದಲ್ಲಿ ವಾಸಿಸುವ ಎಲ್ಲಾ ಜನರು ಹಿಂದೂಗಳು: ಕೇಂದ್ರ ಸಚಿವ ಅಶ್ವಿನಿ ಕುಮಾರ್
ಹೈದರಾಬಾದ್: ‘ಹಿಂದೂ’ ಎನ್ನುವುದು ಕೇವಲ ಭೌಗೋಳಿಕ ಗುರುತಷ್ಟೆ. ಹಿಮಾಲಯ ಮತ್ತು ಹಿಂದೂ ಮಹಾಸಾಗರದ ನಡುವಿನ ಭೂಮಿಯಲ್ಲಿ ವಾಸಿಸುವ ಎಲ್ಲಾ ಜನರು ಹಿಂದೂಗಳು ಎಂದು ಕೇಂದ್ರ ಸಚಿವ ಅಶ್ವಿನಿ ಕುಮಾರ್ ಚೌಬೆ ಶನಿವಾರ ಹೇಳಿದ್ದಾರೆ.
ಹೈದರಾಬಾದ್‌ನಲ್ಲಿ ಭಾರತ್ ನೀತಿ ಸಂಸ್ಥೆ (Bharat Niti Organisation) ಆಯೋಜಿಸಿದ್ದ ‘ಡಿಜಿಟಲ್ ಹಿಂದೂ ಕಾನ್‌ಕ್ಲೇವ್’ನ 10 ನೇ ಆವೃತ್ತಿಯಲ್ಲಿ ಮಾತನಾಡಿದ ಅವರು, ‘ನಮ್ಮ ದೇಶ ಜ್ಞಾನದ ನಾಡು ಎಂಬುದನ್ನು ಅನೇಕ ವಿದೇಶಿ ವಿದ್ವಾಂಸರು ಕೂಡ ಒಪ್ಪಿಕೊಂಡಿದ್ದಾರೆ. ಹೀಗಾಗಿ ನಾವೆಲ್ಲರೂ ಭಾರತೀಯರಾಗಿರುವುದಕ್ಕೆ ಹೆಮ್ಮೆ ಪಡಬೇಕು’ ಎಂದು ಹೇಳಿದರು.
‘ಹಿಂದೂ ಧರ್ಮ ಎನ್ನುವುದು ಒಂದು ಜೀವನ ವಿಧಾನವಾಗಿದೆ ಮತ್ತು ನಾವು ಎಂದಿಗೂ ‘ಹಿಂದೂ’ ಪದವನ್ನು ಸೀಮಿತ ಗಡಿಗಳಿಗೆ ನಿರ್ಬಂಧಿಸಬಾರದು ಎಂದು ನಾನು ಹೇಳುತ್ತೇನೆ. ಹಿಂದೂ ಎನ್ನುವುದು ಭೌಗೋಳಿಕ ಗುರುತು. ಹಿಮಾಲಯ ಮತ್ತು ಹಿಂದೂ ಮಹಾಸಾಗರದ ನಡುವೆ ವಾಸಿಸುವ ಎಲ್ಲಾ ಜನರು ಹಿಂದೂಗಳು’ ಎಂದು ಚೌಬೆ ತಿಳಿಸಿದರು.