ಮಂಗಳೂರು: ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರಾಷ್ಟ್ರ ಧ್ವಜವನ್ನೇ ಉಲ್ಟಾ ಹಾರಿಸಿ ಅಪಮಾನ

ಮಂಗಳೂರು: ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ದೊಡ್ಡ ಎಡವಟ್ಟು ನಡೆದಿದೆ. ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ ಧ್ವಜಾರೋಹಣ ನೆರವೇರಿಸಿದ ವೇಳೆ, ರಾಷ್ಟ್ರ ಧ್ವಜವನ್ನೇ ಉಲ್ಟಾ ಹಾರಿಸಿ ಅಪಮಾನ ಎಸಗಲಾಗಿದೆ.
ಧ್ವಜ ಸ್ತಂಭದಲ್ಲಿ ಮೊದಲೇ ರೆಡಿ ಮಾಡಿದ್ದ ಧ್ವಜವನ್ನು ಉಸ್ತುವಾರಿ ಸಚಿವರು ಅದರ ಹಗ್ಗ ಎಳೆದು ಹಾರಿಸಿದ್ದಾರೆ. ಸಚಿವ ಅಂಗಾರ ಧ್ವಜಕ್ಕೆ ಸೆಲ್ಯೂಟ್ ಹೊಡೆಯುತ್ತಿದ್ದಂತೆ ಜೊತೆಗಿದ್ದ ಜಿಲ್ಲಾಧಿಕಾರಿ ರಾಜೇಂದ್ರ ಕೆ.ವಿ. ಮತ್ತು ಪೊಲೀಸ್ ಕಮಿಷನರ್ ಶಶಿಕುಮಾರ್ ಕೂಡ ಸೆಲ್ಯೂಟ್ ಹೊಡೆದಿದ್ದಾರೆ. ನೆರೆದಿದ್ದವರೆಲ್ಲ ಎದ್ದು ನಿಂತು ಧ್ವಜಕ್ಕೆ ವಂದನೆ ಸಲ್ಲಿಸಿದ್ದಾರೆ. ಆಬಳಿಕ ಸಹಜ ಎಂಬಂತೆ ರಾಷ್ಟ್ರ ಗೀತೆಯನ್ನು ಹಾಡಲಾಗಿದೆ.
ಆದರೆ ತ್ರಿವರ್ಣ ಧ್ವಜ ತಲೆಕೆಳಗಾಗಿ ಹಾರಿದ್ದು ಅಲ್ಲಿದ್ದವರಿಗೆ ಅಲ್ಲಿವರೆಗೂ ಗೊತ್ತಿರಲಿಲ್ಲ. ಆನಂತರ ಅಧಿಕಾರಿಗಳು ಧ್ವಜ ತಲೆಕೆಳಗಾಗಿದ್ದನ್ನು ಗಮನಿಸಿ ಮತ್ತೆ ಕೆಳಗಿಳಿಸಿ ಸರಿ ಪಡಿಸಿದ್ದಾರೆ. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಉಸ್ತುವಾರಿ ಸಚಿವ ಅಂಗಾರ, ಸಂಸದ ನಳಿನ್ ಕುಮಾರ್, ಶಾಸಕರಾದ ವೇದವ್ಯಾಸ ಕಾಮತ್, ಯು.ಟಿ.ಖಾದರ್ ಸೇರಿದಂತೆ ಅಧಿಕಾರಿ ವರ್ಗ ತೀವ್ರ ಮುಜುಗರಕ್ಕೆ ಒಳಗಾಗಿದ್ದಾರೆ.
ಈ ಹಿಂದೆ ತಾಲೂಕು ಮಟ್ಟದಲ್ಲಿ ಕೆಲವು ಕಡೆ ರಾಷ್ಟ್ರ ಧ್ವಜ ತಲೆಕೆಳಗಾಗಿ ಎಡವಟ್ಟು ಆಗಿದ್ದಿದೆ. ಆದರೆ, ಜಿಲ್ಲಾ ಮಟ್ಟದ ಕಾರ್ಯಕ್ರಮದಲ್ಲಿ ಮಂಗಳೂರಿನ ಮಟ್ಟಿಗೆ ಇದೇ ಮೊದಲಿಗೆ ಈ ರೀತಿಯ ತಪ್ಪು ನಡೆದಿದೆ. ಅಧಿಕಾರಿ ವರ್ಗದ ಗಂಭೀರ ಪ್ರಮಾದ ಅಲ್ಲಿ ಸೇರಿದ್ದ ಎಲ್ಲರನ್ನೂ ತೀವ್ರ ಮುಜುಗರಕ್ಕೀಡು ಮಾಡಿದೆ.